ಮಂಗಳೂರು: ಕೊನೆಗೂ ಸೆರೆ ಸಿಕ್ಕ ಇಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ
Saturday, December 25, 2021
ಮಂಗಳೂರು: ಅಪ್ರಾಪ್ತ ಬಾಲಕಿಯ ಎದೆಗೆ ಕೈ ಹಾಕಿ ಲೈಂಗಿಕ ಕಿರುಕುಳ ನೀಡಿರುವುದು ಸೇರಿದಂತೆ ಮತ್ತೋರ್ವ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಸಾರ್ವಜನಿಕರೇ ಕಾದು ಕುಳಿತು ಪತ್ತೆ ಹಚ್ಚಿ ಪೊಲೀಸರಿಗೊಪ್ಪಿಸಿದ ಘಟನೆ ಇಂದು ನಡೆದಿದೆ.
ಮಂಜೇಶ್ವರ ಹೊಸಬೆಟ್ಟು ನಿವಾಸಿ ಮುಸ್ತಫಾ ಲೈಂಗಿಕ ಕಿರುಕುಳ ನೀಡಿದ ಆರೋಪಿ.
ಆರೋಪಿ ಮುಸ್ತಫಾ ತಲಪಾಡಿಯ ದೇವಿಪುರಕ್ಕೆ ತೆರಳುವ ಒಳರಸ್ತೆಯಲ್ಲಿ ಒಂಟಿಯಾಗಿ ಹೋಗುತ್ತಿದ್ದ ಬಾಲಕಿಯ ಎದೆಗೆ ಕೈ ಹಾಕಿ ಕಿರುಕುಳ ನೀಡಿ ಪರಾರಿಯಾಗಿದ್ದ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ಸಿಸಿ ಕ್ಯಾಮರಾವನ್ನು ಪರಿಶೀಲನೆ ನಡೆಸಿ ಆರೋಪಿಯ ಗುರುತು ಪತ್ತೆ ಹಚ್ಚಿದ್ದರೂ, ಆರೋಪಿ ಪತ್ತೆಯಾಗಿರಲಿಲ್ಲ.
ಅಲ್ಲದೆ ಘಟನೆ ನಡೆದ ಮರುದಿನ 22 ವರ್ಷದ ಯುವತಿಯೋರ್ವಳು ಪೊಲೀಸ್ ಠಾಣೆಗೆ ಬಂದು ಇದೇ ಆರೋಪಿ ಮುಸ್ತಫಾ ತನಗೂ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರು ದಾಖಲಿಸಿದ್ದಳು.
ಇಂದು ಆರೋಪಿ ಸ್ಕೂಟರ್ ನಲ್ಲಿ ಬರುತ್ತಿದ್ದ ಸಂದರ್ಭ ಸಾರ್ವಜನಿಕರೇ ದೇವಿಪುರದಲ್ಲಿ ತಡೆದು ನಿಲ್ಲಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.