ನವಜಾತ ಶಿಶುವನ್ನು ಹೊಲದಲ್ಲಿ ಎಸೆದು ಹೋದ ಕಟುಕರು: ರಾತ್ರಿಯಿಡೀ ಕಾವಲು ಕಾಯ್ದು ಶಿಶುವಿನ ಜೀವ ಉಳಿಸಿದ ಬೀದಿನಾಯಿ
Wednesday, December 22, 2021
ಛತ್ತೀಸ್ಗಡ: ಯಾರೋ ಹೊಲದಲ್ಲಿ ಬಿಸಾಡಿ ಹೋಗಿರುವ ನವಜಾತ ಶಿಶುವೊಂದನ್ನು ತನ್ನ ಮರಿಗಳ ಹಿಂಡಿನೊಂದಿಗೆ ಬೀದಿನಾಯಿಯೊಂದು ರಾತ್ರಿಯಿಡೀ ಕಾವಲು ಕಾದು ಮಗುವಿನ ಪ್ರಾಣ ಉಳಿಸಿರುವ ಘಟನೆಯೊಂದು ನಡೆದಿದೆ. ಈ ಮೂಲಕ ಬುದ್ಧಿ ಇರುವ ಜೀವಿ ಮನುಷ್ಯನಿಗಿಂತ ಮೂಕ ಪ್ರಾಣಿಗಳೇ ಎಷ್ಟೋ ವಾಸಿ ಎಂಬಂತಾಗಿದೆ.
ಇಂತಹ ಘಟನೆ ನಡೆದಿದ್ದು ಛತ್ತಿಸಗಢ ರಾಜ್ಯದ ಮುಂಗೇಲಿ ಜಿಲ್ಲೆ ಲೊರ್ಮಿಯ ಸರಿಸ್ತಾಲ್ ಗ್ರಾಮದಲ್ಲಿ. ಇದು ಮೂರು ದಿನಗಳ ಹಿಂದೆ ನಡೆದಿದಿರುವ ಘಟನೆಯಾಗಿದೆ. ಹೆಣ್ಣು ಮಗು ಎನ್ನುವ ಕಾರಣಕ್ಕೋ ಅಥವಾ ಅಕ್ರಮ ಸಂಬಂಧದಿಂದ ಜನಿಸಿದೆ ಎನ್ನುವ ಕಾರಣಕ್ಕೋ … ಏನೋ ಆಗಷ್ಟೇ ಜನಿಸಿರುವ ಈ ಶಿಶುವನ್ನು ಕಟುಕ ಹೃದಯಿಗಳು ಯಾರೋ ಹೊಲವೊಂದರಲ್ಲಿ ಇಟ್ಟು ಹೋಗಿದ್ದಾರೆ.
ಹೊಕ್ಕಳು ಬಳ್ಳಿಯೊಂದಿಗೆ ಹೊದ್ದುಕೊಳ್ಳುವ ಬಟ್ಟೆಯೂ ಇಲ್ಲದೆ ಮಗು ಅನಾಥವಾಗಿ ಇತ್ತು. ಆಗ ಅಲ್ಲಿಯೇ ಇದ್ದ ಬೀದಿನಾಯಿಯೊಂದು ಹಸುಗೂಸಿನ ಜೊತೆಗೆ ತನ್ನ ಮರಿಗಳನ್ನೂ ಮಲಗಿಸಿ ಕೊರೆಯುವ ಚಳಿಯನ್ನೂ ಲೆಕ್ಕಿಸದೆ ರಾತ್ರಿಯಿಡೀ ಕಾವಲು ಕಾದಿದೆ. ಬೆಳಗ್ಗೆ ಮಗು ಅಳುವ ಸದ್ದು ಕೇಳಿ ಗ್ರಾಮಸ್ಥರು ಸ್ಥಳಕ್ಕೆ ಬಂದು ನೋಡಿದಾಗ ನಾಯಿಮರಿಗಳ ಜತೆ ಹಸುಗೂಸು ಮಲಗಿರುವುದು ಕಂಡುಬಂದಿದೆ.
ತಕ್ಷಣ ಗ್ರಾಪಂಗೆ ಮಾಹಿತಿ ನೀಡಿ, ಪೊಲೀಸರನ್ನು ಸ್ಥಳಕ್ಕೆ ಕರೆಸಿದ್ದಾರೆ. ಮಗುವಿನ ಮೈಮೇಲೆ ಯಾವುದೇ ಗಾಯದ ಗುರುತು ಇರಲಿಲ್ಲ. ಸ್ಥಳೀಯ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡಿಸಿದ್ದು, ಹಸುಗೂಸು ಆರೋಗ್ಯವಾಗಿದೆ. ಸದ್ಯ ಈ ಶಿಶುವನ್ನು ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ನೀಡಲಾಗಿದೆ. ಇದೀಗ ಶಿಶುವನ್ನು ಎಸೆದು ಹೋದವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಇನ್ನು ಈ ಕಂದಮ್ಮನಿಗೆ ಆಕಾಂಕ್ಷ ಎಂದು ಹೆಸರಿಡಲಾಗಿದೆ. ನಾಯಿ ಮರಿಗಳ ಜತೆ ಶಿಶು ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೆತ್ತ ಕಂದಮ್ಮನನ್ನೇ ಎಸೆದು ಹೋಗಿರುವ ಕಟುಕರಿಗೆ ಶಿಕ್ಷಿಸಿ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇನ್ನು ಈ ಶಿಶುವಿನ ಪ್ರಾಣ ಉಳಿಸಿದ ಶ್ವಾನಕ್ಕೆ ನೆಟ್ಟಿಗರು ಶಹಬ್ಬಾಸ್ ಎನ್ನುತ್ತಿದ್ದಾರೆ.