ಮಂಗಳೂರಿನ ಈ ಯುವತಿಯರು ಬೈಕ್ ನಲ್ಲಿ ಕಚ್ ಗೆ ಪ್ರಯಾಣಿಸಿದ್ದೇಕೆ ಗೊತ್ತಾ?
Saturday, December 25, 2021
ಮಂಗಳೂರು: ಮಾಮೂಲಿ ಎಲ್ಲಾ ಕಡೆಗಳಲ್ಲಿ ಬೈಕ್ ರೈಡರ್ಸ್ ಯುವಕರು ನಮಗೆ ಕಾಣಸಿಗುತ್ತಲೇ ಇರುತ್ತಾರೆ. ಆದರೆ ಇದೀಗ ಮಂಗಳೂರಿನ ನಾಲ್ವರು ಯುವತಿಯರು ಬೈಕ್ ಏರಿ ಕಚ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಇವರು ಮಹಿಳಾ ಸಬಲೀಕರಣದ ಉದ್ದೇಶದಿಂದ "Ride To Rann To Kutch" ಎಂಬ 11 ದಿವಸಗಳ ರೈಡ್ ಮಾಡಲಿದ್ದಾರೆ.
ನಿನ್ನೆ ಸಂಜೆ ಮಂಗಳೂರಿನ ಸರ್ಕ್ಯೂಟ್ ಹೌಸ್ ನಿಂದ ಪ್ರಯಾಣ ಬೆಳೆಸಿದ ಬೈಕ್ ರೈಡರ್ಸ್ ಯುವತಿಯರು ದಿನಕ್ಕೆ 500-600 ಕಿ.ಮೀ. ಕ್ರಮಿಸಿ ಕಚ್ ತಲುಪಲಿದ್ದಾರೆ. ಸುಮಾರು 3,600 ಕಿ.ಮೀ. ದೂರದ ಕಚ್ ಅನ್ನು ಬೈಕ್ ಸವಾರಿ ಮಾಡಿ ಡಿ.29 ರಂದು ತಲುಪಲಿದ್ದಾರೆ. ಅಲ್ಲಿ ಒಂದು ದಿನ ತಂಗುವ ಇವರು ಮತ್ತೆ ಮಂಗಳೂರಿಗೆ ಮರಳಲಿದ್ದಾರೆ. ಈ ಮೂಲಕ 11 ದಿನಗಳ ಪ್ರಯಾಣ ಮುಗಿಸಿ ಮತ್ತೆ ಮಂಗಳೂರು ತಲುಪಲಿದ್ದಾರೆ.
ಕಚ್ ಗೆ ಪ್ರಯಾಣ ಬೆಳೆಸಿದ ನಾಲ್ವರು ಯುವತಿಯರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಗಳಾದ ಕೃತಿ ಉಚ್ಚಿಲ್, ಅಪೂರ್ವ, ಟೆಕ್ಸ್ ಟೈಲ್ಸ್ ಮಾಲಕಿ ಪೂಜಾ ಜೈನ್, ಮೆಡಿಕಲ್ ರೆಪ್ ದಿವ್ಯಾ ಪೂಜಾರಿ ಇದ್ದಾರೆ.
ಮಂಗಳೂರು ಬೈಕರ್ನಿ ತಂಡ ಕಟ್ಟಿಕೊಂಡಿರುವ ಈ ಯುವತಿಯರು ಈಗಾಗಲೇ ರಾಮೇಶ್ವರ, ಕನ್ಯಾಕುಮಾರಿ, ಕೊಡೈಕೆನಾಲ್, ಊಟಿ ಮತ್ತಿತರರ ಕಡೆಗೆ ಬೈಕ್ ರೈಡ್ ಮಾಡಿದ್ದರಂತೆ. ಈ ಎಲ್ಲರೂ ಪರಸ್ಪರ ಬೈಕ್ ರೈಡ್ ಮಾಡಲು ಆರಂಭಿಸಿದ ಬಳಿಕವೇ ಪರಿಚಯವಾದವರಂತೆ. ಅದರಲ್ಲೂ ಅಪೂರ್ವ ಬೈಕ್ ರೈಡ್ ಮಾಡುತ್ತಿದ್ದರೂ ಇಷ್ಟೊಂದು ದೂರ ಮೊದಲ ಬಾರಿ ಬೈಕ್ ರೈಡ್ ಮಾಡುತ್ತಿದ್ದಾರಂತೆ. ಅದಕ್ಕಾಗಿಯೇ 2 ತಿಂಗಳ ಹಿಂದೆ ಬೈಕ್ ಖರೀದಿಸಿ ಪ್ರಾಕ್ಟೀಸ್ ಮಾಡಿದ್ದಾರಂತೆ. ತಮ್ಮ ಈ ಕಾರ್ಯಕ್ಕೆ ಮನೆಯವರ ಸಹಕಾರವೂ ಇದೆ ಎಂದು ಬೈಕ್ ರೈಡರ್ಸ್ ಯುವತಿಯರು ಹೇಳುತ್ತಾರೆ.