ನಾನು ತೆಳ್ಳಗಿದ್ದರಿಂದ ಬಾಡಿ ಶೇಮಿಂಗ್ ಗೆ ಒಳಗಾಗಿ ಪಟ್ಟ ಯಾತನೆ ಅಷ್ಟಿಷ್ಟಲ್ಲ: ನೋವು ತೋಡಿಕೊಂಡ ನಟಿ ಆಥಿಯಾ ಶೆಟ್ಟಿ!
Wednesday, December 22, 2021
ಮುಂಬೈ: ದಪ್ಪಗಿದ್ದರೆ ಕಷ್ಟ ಆದರೆ ಸ್ವಲ್ಪ ತೆಳ್ಳಗಿದ್ದರಂತೂ ಸಂಕಷ್ಟವೇ ಸರಿ ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿಯವರ ಪುತ್ರಿ, ನಟಿ ಆಥಿಯಾ ಶೆಟ್ಟಿ ತಾವು ಅನುಭವಿಸಿರುವ ನೋವಿನ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಮಿಸ್ ಯೂನಿವರ್ಸ್ ಆಗಿ ಕಿರೀಟ ಮುಡಿಗೇರಿಸಿದ ಭಾರತದ ಬ್ಯೂಟಿ ಕ್ವೀನ್ ಹರ್ನಾಜ್ ಸಂಧು ತಾವು ತೆಳ್ಳಗಿದ್ದರಿಂದ ಚಿಕ್ಕಂದಿನಲ್ಲಿ ಅನುಭವಿಸಿದ್ದ ಹಿಂಸೆಯ ಬಗ್ಗೆ ಮಾತನಾಡಿದ್ದರು. ಅದೇ ರೀತಿಯ ವಿಚಾರದಲ್ಲಿ ನಟಿ ಆಥಿಯಾ ಶೆಟ್ಟಿಯೂ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ತಾವು ತೆಳ್ಳಗಿದ್ದ ಕಾರಣ, ಹೇಗೆಲ್ಲಾ ಜನರು ಮಾತನಾಡಿದ್ದರು. ಯಾವ ರೀತಿಯಲ್ಲಿ ಬಾಡಿ ಶೇಮಿಂಗ್ ಮಾಡಿದರು ಎಂಬ ಬಗ್ಗೆ ವಿವರಣೆ ನೀಡಿದ್ದಾರೆ.
ದಪ್ಪಗಿದ್ದಲ್ಲಿ ಮಾತ್ರ ಜನರು ಅಪಹಾಸ್ಯ ಮಾಡುತ್ತಾರೆಂದು ಎಲ್ಲರಿಗೂ ಕಲ್ಪನೆಯಿದೆ. ಆದರೆ ಇದು ತಪ್ಪು ಕಲ್ಪನೆ. ಹಲವು ವಿಧದ ಬಾಡಿ ಶೇಮಿಂಗ್ಗಳಿವೆ. ನಾನು ತೆಳ್ಳಗಿದ್ದ ಕಾರಣಕ್ಕೆ ಅನುಭವಿಸಿರುವ ಹಿಂಸೆ, ಮಾನಸಿಕ ಯಾತನೆ ಮಾತ್ರ ಅಷ್ಟಿಷ್ಟಲ್ಲ. ಮತ್ತೊಬ್ಬರ ತೂಕ, ನೋಟ, ಕೆಲಸಗಳಿಗೆ ಕಾಮೆಂಟ್ ಮಾಡುವುದು ಒಳ್ಳೆಯ ಕಾರ್ಯವಲ್ಲ. ಆದರೂ ಜನರು ಹೀಯಾಳಿಸುವುದು ಬಿಡುವುದಿಲ್ಲ ಎಂದು ಎಂದು ಆಥಿಯಾ ಶೆಟ್ಟಿ ದುಃಖ ತೋಡಿಕೊಂಡಿದ್ದಾರೆ.
ನಾನು ತೀರಾ ತೆಳ್ಳಗಿದ್ದೆ. ಆದ್ದರಿಂದ ಬಾಡಿ ಶೇಮಿಂಗ್ ಅನ್ನು ಎದುರಿಸುತ್ತಲೇ ಇದ್ದೆ. ಆದರೆ ಆತ್ಮವಿಶ್ವಾಸವನ್ನು ನಾನು ಕುಗ್ಗಿಸಿಕೊಳ್ಳಲೇ ಇಲ್ಲ. ಎಲ್ಲರ ಮಾತನ್ನೂ ಆಲಿಸುತ್ತಲೇ ಇದ್ದೆ. ಮಾನಸಿಕವಾಗಿಯೂ ಆರಂಭದಲ್ಲಿ ಕುಗ್ಗಿದ್ದೆ. ಆದರೆ ಇದರಿಂದ ಏನೂ ಪ್ರಯೋಜನವಿಲ್ಲ ಎನ್ನಿಸಿತು. ಬಾಲ್ಯದಲ್ಲಿ ಇಂತಹ ಟೀಕೆಗಳಿಂದ ಬೇಸತ್ತು ನಾನು ನನ್ನ ದೇಹದ ಬಗ್ಗೆ ಭಾರೀ ಜಾಗರೂಕಳಾಗಿದ್ದೆ. ಈಗಲೂ ಹಾಗೆಯೇ ಇದ್ದೇನೆ. ಜನರ ಮಾತುಗಳನ್ನು ಯಾವತ್ತೂ ನಾನು ಕಿವಿಯ ಮೇಲೆ ಹಾಕಿಕೊಳ್ಳದೆ ಎಲ್ಲವನ್ನೂ ಆತ್ಮವಿಶ್ವಾಸದಿಂದ ಎದುರಿಸಿದೆ. ಈಗ ಇನ್ನಷ್ಟು ಆತ್ಮವಿಶ್ವಾಸ ಹೊಂದಿದ್ದೇನೆ ಎಂದಿದ್ದಾರೆ.
ಒಬ್ಬೊಬ್ಬರ ದೇಹದ ಸ್ವರೂಪ ಒಂದೊಂದು ರೀತಿ ಇರುತ್ತದೆ. ಆದ್ದರಿಂದ ಅವರ ಬಗ್ಗೆ ಒಂದು ಮಾತು ಒಳ್ಳೆಯದು ಹೇಳಲು ಸಾಧ್ಯವಾದರೆ ಹೇಳಿ. ಅದು ಸಾಧ್ಯವಾಗುವುದಿಲ್ಲವೇ ನಕಾರಾತ್ಮಕವಾದ ಮಾತನ್ನಾಡಿ ಅವರನ್ನು ಚುಚ್ಚಬೇಡಿ. ಅದು ಅವರ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತದೆ. ಎಲ್ಲರೂ ಅಪರಿಪೂರ್ಣರು. ಆದರೆ ಅಪರಿಪೂರ್ಣವಾಗಿರುವುದೇ ಪರಿಪೂರ್ಣತೆ. ಎಲ್ಲರೂ ಒಂದೇ ರೀತಿ ಕಾಣಲು ಸಾಧ್ಯವಿಲ್ಲ. ಎಲ್ಲವೂ ಸರಿಯಾಗಿರಲೂ ಸಾಧ್ಯವಿಲ್ಲ. ಆದ್ದರಿಂದ ಇದ್ದಂತೆ ಎಲ್ಲವನ್ನೂ ಸ್ವೀಕರಿಸಿ ಎಂದು ಆಥಿಯಾ ಇದೇ ಸಂದರ್ಭದಲ್ಲಿ ಬಾಡಿಶೇಮಿಂಗ್‌ಗೆ ಒಳಗಾಗುವವರಿಗೆ ಕಿವಿಮಾತು ಹೇಳಿದ್ದಾರೆ.