-->
'ಈಗ' ನಟಿಗೆ ಬಾಧಿಸುತ್ತಿದೆ ಸ್ತನ ಕ್ಯಾನ್ಸರ್: ತನ್ನ ಪರಿಸ್ಥಿತಿಯ ಬಗ್ಗೆ ಅಭಿಮಾನಿಗಳ ಮುಂದೆ ಹಂಚಿಕೊಂಡ 'ಹಂಸ ನಂದಿನಿ'

'ಈಗ' ನಟಿಗೆ ಬಾಧಿಸುತ್ತಿದೆ ಸ್ತನ ಕ್ಯಾನ್ಸರ್: ತನ್ನ ಪರಿಸ್ಥಿತಿಯ ಬಗ್ಗೆ ಅಭಿಮಾನಿಗಳ ಮುಂದೆ ಹಂಚಿಕೊಂಡ 'ಹಂಸ ನಂದಿನಿ'

ಹೈದರಾಬಾದ್‌: ನಟಿ, ನೃತ್ಯಗಾತಿ, ಮಾಡೆಲ್ ಹಂಸ ನಂದಿನಿಗೆ ಸ್ತನ ಕ್ಯಾನ್ಸರ್​ ಕಾಡುತ್ತಿದ್ದು, ಇದೀಗ ಅವರು ತಮ್ಮ ಬೋಳು ತಲೆಯ ಇಲ್ಲದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದರೊಂದಿಗೆ ಭಾರೀ ಉದ್ದದ ಬರಹವನ್ನು ಬರೆದಿದ್ದಾರೆ. ಅದರಲ್ಲಿ ಹಂಸ ನಂದಿನಿ ಈ ರೀತಿ ಬರೆದುಕೊಂಡಿದ್ದಾರೆ, ‘ನಾನು ಸ್ತನಕ್ಯಾನ್ಸರ್ ರೋಗಿಯಾಗಿದ್ದು, ರೋಗ ಈಗ 3ನೇ ಹಂತದಲ್ಲಿದೆ. 19 ವರ್ಷಗಳ ಹಿಂದೆ ನನ್ನ ತಾಯಿಯೂ ಕ್ಯಾನ್ಸರ್​ಗೆ ಬಲಿಯಾಗಿದ್ದರು. ಆ ನೋವು ಕಾಡುತ್ತಿರುವಾಗಲೇ ನನಗೂ ಕ್ಯಾನ್ಸರ್​ ವಕ್ಕರಿಸಿಕೊಂಡಿದೆ’ ಎಂದು ಬರೆದುಕೊಂಡಿದ್ದಾರೆ. 

ಈ ಕಹಿ ಸುದ್ದಿಯು ಅವರ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. 2004ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಹಂಸ ನಂದಿನಿ, ಟಾಲಿವುಡ್​ನ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು. 2006ರಲ್ಲಿ ತೆರೆ ಕಂಡ ‘ಮೋಹಿನಿ 9886788888’ ಸಿನಿಮಾ ಮೂಲಕ ಚಂದನವನಕ್ಕೂ ಕಾಲಿಟ್ಟಿದ್ದರು. ಪ್ರಭಾಸ್​ ನಟನೆಯ ‘ಮಿರ್ಚಿ’, ಪವನ್​ ಕಲ್ಯಾಣ್​ ಅಭಿನಯದ ‘ಅತ್ತಾರಿಂಟಿಕಿ ದಾರೇದಿ’ ಸಿನಿಮಾಗಳಲ್ಲಿ ವಿಶೇಷ ಪಾತ್ರದಲ್ಲಿ ತೆಲುಗು ಸಿನಿಪ್ರಿಯರಿಗೂ ಹತ್ತಿರವಾಗಿದ್ದರು. ಸುದೀಪ್​ ಅಭಿನಯದ ‘ಈಗ’ ಸಿನಿಮಾದಲ್ಲಿ ಅತಿಥಿ ಪಾತ್ರವೊಂದನ್ನು ಮಾಡಿದ್ದರು. 2018ರಲ್ಲಿ ತೆರೆಕಂಡ ‘ಪಂತಂ’ ಸಿನಿಮಾವೇ ಹಂಸ ನಂದಿನಿ ಅಭಿನಯದ ಕೊನೆಯ ಸಿನಿಮಾವಾಗಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿದ್ದ ಹಂಸ ನಂದಿನಿ, ಡಿ.20ರಂದು ಬೆಳಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕ್ಯಾನ್ಸರ್​ ರೋಗದ ಬಗ್ಗೆ ಸುದೀರ್ಘವಾದ ಬರಹವನ್ನು ಬರೆದಿದ್ದಾರೆ. 


‘ಕಳೆದ 4 ತಿಂಗಳ ಹಿಂದೆ ಎದೆಯಲ್ಲೊಂದು ಗಂಟು ಕಾಣಿಸಿಕೊಂಡಿತ್ತು. ವೈದ್ಯರ ಬಳಿ ತಪಾಸಣೆ ಮಾಡಿದಾಗ ಸ್ತನ ಕ್ಯಾನ್ಸರ್​ 3ನೇ ಹಂತದಲ್ಲಿರುವುದು ಗೊತ್ತಾಯಿತು. ನನ್ನ ತಾಯಿಯೂ 40 ವರ್ಷ ವಯಸ್ಸಿನಲ್ಲಿಯೇ ಅಂದರೆ 19 ವರ್ಷಗಳ ಹಿಂದೆ​ ಕ್ಯಾನ್ಸರ್ ರೋಗದಿಂದ ಮೃತಪಟ್ಟಿದ್ದರು. ಅಮ್ಮನನ್ನು ಕಳೆದುಕೊಂಡ ನೋವು ಈಗಲೂ ನನ್ನನ್ನು ಕಾಡುತ್ತಲೇ ಇದೆ. ಇದೀಗ ನನಗೂ ಕ್ಯಾನ್ಸರ್​ ರೋಗ ಬಾಧಿಸುತ್ತಿದೆ. ಈಗಾಗಲೇ ಒಂಬತ್ತು ಬಾರಿ ಕಿಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ ಏಳು ಬಾರಿ ಕಿಮೋಥೆರಪಿ ಮಾಡಿಸಿಕೊಳ್ಳಬೇಕಾಗಿದೆ’ ಎಂದು ಹಂಸ ನಂದಿನಿ ವಿವರಿಸಿದ್ದಾರೆ.     

'ಮಹಾಮಾರಿ ಕ್ಯಾನ್ಸರ್​ಗೆ ನನ್ನ ಬದುಕನ್ನು ಬಲಿಯಾಗಿಸಲು ನಾನು ಬಯಸುವುದಿಲ್ಲ. ನಗುತ್ತಲೇ ಧೈರ್ಯದಿಂದಲೇ ನಾನು ಕ್ಯಾನ್ಸರ್​ ವಿರುದ್ಧ ಹೋರಾಡುವೆ. ಗುಣಮುಖವಾಗಿ ಮತ್ತೊಮ್ಮೆ ನಿಮ್ಮ ಮುಂದೆ ಬರುತ್ತೇನೆ. ನನ್ನ ಕಥೆ ಎಲ್ಲರಿಗೂ ಸ್ಫೂರ್ತಿಯಾಗಲಿ’ ಎಂದು ಬರೆದುಕೊಂಡಿದ್ದಾರೆ. ಈ ನೋವಿನಲ್ಲೂ ಹಂಸ ನಂದಿನಿಯ ಸ್ಪೂರ್ತಿದಾಯಕ ಮಾತುಗಳನ್ನು ಕೇಳಿ ಅವರ ಅಭಿಮಾನಿಗಳು ಭಾವುಕರಾಗಿದ್ದಾರೆ. ಶೀಘ್ರವೇ ಗುಣಮುಖವಾಗಿ ಬನ್ನಿ ಎಂದು ಹಾರೈಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article