
ಮಧ್ಯರಾತ್ರಿ ಕಾರಿನಲ್ಲಿ ಹಿಂಬಾಲಿಸಿ ಪುಂಡಾಟಿಕೆ ಮೆರೆದಾತ ಪೊಲೀಸ್ ವಶಕ್ಕೆ: ಈತ ಎಂಎಸ್ ವಿದ್ಯಾರ್ಥಿ
Wednesday, December 15, 2021
ಬೆಂಗಳೂರು: ನಗರದಲ್ಲಿ ಮಹಿಳೆಯೋರ್ವರು ತಡರಾತ್ರಿ ತನ್ನಿಬ್ಬರು ಮಕ್ಕಳೊಂದಿಗೆ ಕಾರಿನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಪುಂಡಾಟಿಕೆ ಮೆರೆದ ಯುವಕನೋರ್ವನನ್ನು ಅಮೃತಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಮೂಲದ ವಿಜಯ ಭಾರದ್ವಾಜ್ ಎಂಬಾತ ಬಂಧಿತ ಆರೋಪಿ. ಈತ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಬೆಂಗಳೂರಿನಲ್ಲಿ ಎಂಬಿಬಿಎಸ್ ಮುಗಿಸಿ ಎಂಎಸ್ ವ್ಯಾಸಂಗ ಮಾಡುತ್ತಿದ್ದಾನೆ ಎನ್ನಲಾಗಿದೆ.
ತಡರಾತ್ರಿ ವೇಳೆ ಪಾನಮತ್ತನಾಗಿ ಮಹಿಳೆಯ ಪುತ್ರಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತನ ಪುಂಡಾಟಿಕೆಯಿಂದ ದೀಪಾ ಶ್ರೀಕುಮಾರ್ ಎಂಬಾಕೆ ಹೈರಾಣಾಗಿದ್ದರು. ಅವರು ಈತನನ್ನು ನಿರ್ಲಕ್ಷ್ಯ ಮಾಡಿ ಕಾರಲ್ಲಿ ಮುಂದೆ ಸಾಗಿದರೂ ಹಿಂಬಾಲಿಸಿ ಹಿಂಸೆ ನೀಡಿದ್ದ. ಈ ಘಟನೆಯ ಬಗ್ಗೆ ಅವರು ಕಾರಿನಲ್ಲಿರುವಾಗಲೇ ಅಮೃತಹಳ್ಳಿ ಠಾಣೆಗೆ ದೀಪಾ ದೂರು ನೀಡಿದ್ದರು. ಇದರ ವೀಡಿಯೋ ಕೂಡಾ ಮಾಡಿ ವೈರಲ್ ಮಾಡಿದ್ದರು.
ದೀಪಾ ಶ್ರೀಕುಮಾರ್ ತಮ್ಮ ಪುತ್ರಿ ಹಾಗೂ ಪುತ್ರನೊಂದಿಗೆ ಶುಕ್ರವಾರ ಹೊಸಕೋಟೆಯಲ್ಲಿರುವ ಸಂಬಂಧಿಕರ ಮನೆಗೆ ಕಾರ್ಯಕ್ರಮದ ನಿಮಿತ್ತ ಹೋಗಿದ್ದರು. ಅಲ್ಲಿಂದ ತಡರಾತ್ರಿ 2ಗಂಟೆ ವೇಳೆಗೆ ಮರಳಿ ಮನೆಗೆ ವಾಪಸ್ಸಾಗುತ್ತಿದ್ದರು.
ಮಾರ್ಗ ಮಧ್ಯೆ ಹೆಬ್ಬಾಳದ ಬಳಿ ಇವರ ಕಾರಿನ ಟೈರ್ ಪಂಕ್ಚರ್ ಆಗಿತ್ತು. ಟೈರ್ ಬದಲಿಸುತ್ತಿದ್ದ ಸಂದರ್ಭ ಅಪರಿಚಿತ ಕಾರೊಂದು ಇವರ ಪಕ್ಕ ಬಂದು ನಿಂತಿತ್ತು. ಕಾರಿನಲ್ಲಿದ್ದ ವ್ಯಕ್ತಿ, ದೀಪಾ ಪುತ್ರಿಗೆ ಅಸಭ್ಯವಾಗಿ ಪ್ರಶ್ನಿಸಿದ್ದಾನೆ. ಆ ವೇಳೆ ದೀಪಾ ಶ್ರೀಕುಮಾರ್ ಆತನಿಗೆ ಬೈದು ತಕ್ಷಣ ಕಾರು ಹತ್ತಿ ಮುಂದೆ ಹೋಗಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಪುಂಡಾಟಿಕೆ ಮೆರೆದಾತ ಗೊರಗುಂಟೆಪಾಳ್ಯದವರೆಗೂ ಅವರ ಕಾರನ್ನು ಹಿಂಬಾಲಿಸಿಕೊಂಡು ಬಂದು ಅಸಭ್ಯವಾಗಿ ವರ್ತಿಸಿದ್ದಾನೆ.
ಇದರಿಂದ ಹೆದರಿದ ದೀಪಾ ಶ್ರೀಕುಮಾರ್ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಇವರು ಗೊರಗುಂಟೆಪಾಳ್ಯ ತಲುಪುತ್ತಿದ್ದಂತೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಪೊಲೀಸರನ್ನು ನೋಡಿದ ತಕ್ಷಣ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆಯಿಂದ ಆತಂಕಿತರಾದ ದೀಪಾ ಶ್ರೀಕುಮಾರ್ ಮಕ್ಕಳೊಂದಿಗೆ ರಾತ್ರಿಯಿಡೀ ಆರ್ಎಂಸಿ ಯಾರ್ಡ್ ಠಾಣೆಯಲ್ಲೇ ಉಳಿದಿದ್ದರು. ದೀಪಾ ದೂರಿನೊಂದಿಗೆ ಆರೋಪಿಯ ಕಾರಿನ ನಂಬರನ್ನೂ ನೀಡಿದ್ದರು.
ದೀಪಾ ಕಾರಿನಲ್ಲಿರುವಾಗಲೇ ಪೊಲೀಸ್ ಕಂಟ್ರೋಲ್ ರೂಮ್ ಕರೆ ಮಾಡಿ ದೂರು ನೀಡುತ್ತಿದ್ದಾಗ ಆತಂಕದಿಂದ ಸಂಭಾಷಣೆ ನಡೆಸುತ್ತಿರುವುದನ್ನು ಜತೆಗಿದ್ದವರು ವೀಡಿಯೋ ಮಾಡಿದ್ದರು. ಎದುರಿಗಿನ ಕಾರಿನಲ್ಲಿದ್ದ ವ್ಯಕ್ತಿ ಇವರ ಕಾರಿನ ಸಮೀಪಕ್ಕೆ ಆಗಮಿಸುತ್ತಿರುವುದು, ಮಹಿಳೆ ಆತಂಕಗೊಂಡಿರುವುದು ಇದರಲ್ಲಿ ದಾಖಲಾಗಿತ್ತು. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.