ರಸ್ತೆ ಅಪಘಾತ: ಟಿಪ್ಪರ್ ಲಾರಿ ಹಿಂಬದಿ ಚಕ್ರಕ್ಕೆ ಸಿಲುಕಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಸ್ಥಳದಲ್ಲೇ ದುರ್ಮರಣ; CCTVಯಲ್ಲಿ ದೃಶ್ಯ ಸೆರೆ
Sunday, December 12, 2021
ಮೆಡ್ಚಲ್ (ತೆಲಂಗಾಣ): ಸ್ಕೂಟರ್ ನಲ್ಲಿ ಸಂಚಾರ ಮಾಡುತ್ತಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳು ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿರುವ ಘಟನೆ ತೆಲಂಗಾಣದ ಮೆಡ್ಚಲ್ನಲ್ಲಿ ಸಂಭವಿಸಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೆಡ್ಚಲ್ನ ಗಂಡಿ ಮೈಸಮ್ಮ ಚೌರಸ್ಥಳದಲ್ಲಿ ಈ ಅವಘಡ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮರ್ರಿ ಲಕ್ಷ್ಮಣರೆಡ್ಡಿ ಕಾಲೇಜ್ನ ಮೂರನೇ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಮೇಘನಾ ಎಂಬ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಅಪಘಾತದಲ್ಲಿ ಮತ್ತೋರ್ವ ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಮೇಘನಾ ತನ್ನ ಸ್ನೇಹಿತೆ ಸುಮನಶ್ರೀಯೊಂದಿಗೆ ಸ್ಕೂಟರ್ನಲ್ಲಿ ಕಾಲೇಜ್ನಿಂದ ಮನೆಗೆ ಮರಳಿ ಆಗಮಿಸುತ್ತಿದ್ದಳು. ಈ ಸಂದರ್ಭ ಹಿಂಬದಿಯಿಂದ ಬಂದ ಟಿಪ್ಪರೊಂದು ಇವರು ಸಂಚರಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ರಸ್ತೆ ಮೇಲೆ ಬಿದ್ದ ಮೇಘನಾ ಮೇಲೆಯೇ ಟಿಪ್ಪರ್ನ ಹಿಂದಿನ ಚಕ್ರ ಹರಿದು ಹೋಗಿರುವ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.