ಚೀನಾ ಜಿಲಿನ್ ಪ್ರಾಂತ್ಯದಲ್ಲಿ ದಂಪತಿ ಮಕ್ಕಳು ಪಡೆಯಲು ಸಿಗುತ್ತದಂತೆ ಸಾಲ: ಜನಸಂಖ್ಯೆ ಹೆಚ್ಚಳಕ್ಕೆ ನೂತನ ಕ್ರಮ
Sunday, December 26, 2021
ಬೀಜಿಂಗ್: ಭಾರೀ ವೇಗವಾಗಿ ಜನಸಂಖ್ಯೆಯು ಕುಸಿತ ಕಾಣುತ್ತಿರುವ ಚೀನಾದ ಈಶಾನ್ಯ ಭಾಗದ ಜಿಲಿನ್ ಪ್ರಾಂತ್ಯದಲ್ಲಿ ಮಕ್ಕಳು ಪಡೆಯುವುದನ್ನು ಉತ್ತೇಜಿಸುವುದಕ್ಕೆ ‘ವಿವಾಹ ಹಾಗೂ ಜನನ ಗ್ರಾಹಕ ಸಾಲಗಳು’ ಎಂಬ ಸಾಲಮೇಳವನ್ನು ಹಮ್ಮಿಕೊಳ್ಳಲಾಗಿದೆ.
ವಿವಾಹವಾದ ದಂಪತಿಯು ಮಕ್ಕಳನ್ನು ಪಡೆಯುವ ಉದ್ದೇಶ ಹೊಂದಿದ್ದಲ್ಲಿ ಅಂಥವರಿಗೆ 2 ಲಕ್ಷ ಯುವಾನ್ (23.56 ಲಕ್ಷ ರೂ.) ವಿಶೇಷ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ಗಳ ಮೂಲಕ ಒದಗಿಸಲಾಗುತ್ತಿದೆ. ದಂಪತಿ ಎಷ್ಟು ಮಕ್ಕಳನ್ನು ಹೊಂದಲಿದ್ದಾರೆ ಎಂಬುದರ ಮೇಲೆ ಬಡ್ಡಿಯ ದರವು ವ್ಯತ್ಯಾಸವಾಗುತ್ತದೆ. ಮಗುವನ್ನು ಹೊಂದಲು ಬಯಸಲು ನೋಂದಣಿ ಮಾಡಿಕೊಂಡಿರುವ ದಂಪತಿ ಅನ್ಯ ಪ್ರಾಂತ್ಯದವರಾಗಿದ್ದಲ್ಲಿ ತಮ್ಮ ಪ್ರಾಂತ್ಯದಲ್ಲಿ ನಿವಾಸ ಹೊಂದಲು ಅನುಮತಿ, ಸಾರ್ವಜನಿಕ ಸೇವೆಗಳ ಬಳಕೆಗೆ ಅವಕಾಶ, 2 ಅಥವಾ 3 ಮಕ್ಕಳನ್ನು ಹೊಂದಿದ ದಂಪತಿಗೆ ತೆರಿಗೆಯಲ್ಲಿ ರಿಯಾಯಿತಿ, ಉದ್ಯಮ ನಡೆಸಲು ಪ್ರೋತ್ಸಾಹ ಇನ್ನಿತರ ಸೌಲಭ್ಯ ಘೋಷಣೆ ಮಾಡಲಾಗಿದೆ. ಅಲ್ಲದೆ ಗರ್ಭಿಣಿಯರಿಗೆ ಪ್ರಸವವಾಗುವ ಸಮಯ ನೀಡುವ ರಜೆಯನ್ನು 158 ದಿನದಿಂದ 180 ದಿನಕ್ಕೆ ಹೆಚ್ಚಿಸಲಾಗಿದೆ.
ಚೀನಾದಲ್ಲಿ ಕಳೆದ ಹಲವು ವರ್ಷಗಳಿಂದ ಜನಸಂಖ್ಯೆಯು ತೀವ್ರವಾಗಿ ಕುಸಿತವಾಗಿದೆ. ಇದರಿಂದ ಭವಿಷ್ಯದಲ್ಲಿ ಶ್ರಮಿಕರ ಶಕ್ತಿಯು ಕಡಿಮೆ ಆಗುಬಹುದೆಂಬ ಆತಂಕಗೊಂಡಿರುವ ಕಮ್ಯುನಿಸ್ಟ್ ಆಡಳಿತ, ಹೆಚ್ಚು ಮಕ್ಕಳನ್ನು ಹೊಂದುವುದನ್ನು ಉತ್ತೇಜಿಸಲು ಯೋಜನೆಗಳನ್ನು ಹಮ್ಮಿಕೊಂಡಿದೆ.