ಎಸ್ಎಸ್ಎಲ್ ಸಿ ವಿದ್ಯಾರ್ಥಿಯೊಂದಿಗೆ ಓಡಿಹೋಗಿ ಮದುವೆಯಾದ ಯುವತಿ: ಇಬ್ಬರೂ ಪೊಲೀಸ್ ಅತಿಥಿಯಾದರು
Saturday, January 1, 2022
ಕೊಟ್ವಾಲಿ (ಪಶ್ಚಿಮ ಬಂಗಾಳ): ಎಫ್ ಬಿ ಮೂಲಕ ಪರಿಚಯಗೊಂಡು ಬಳಿಕ ಸ್ನೇಹಕ್ಕೆ ತಿರುಗಿ, ಸ್ನೇಹ ಮುಂದುವರಿದು ಪ್ರೀತಿ ಪ್ರಣಯ ಎಂದು ಮರುಳಾಗಿ ಯುವತಿಯೋರ್ವಳು ಬಾಲಕನೊಂದಿಗೆ ಓಡಿಹೋಗಿ ಮದುವೆಯಾಗಿರುವ ಘಟನೆ ಪಶ್ಚಿಮಬಂಗಾಳದಲ್ಲಿ ನಡೆದಿದೆ.
ನಾಡಿಯಾದ ಕೃಷ್ಣನಗರ ಕೊಟ್ವಾಲಿಯ 15ರ ಬಾಲಕ ಮತ್ತು ಶಾಂತಿನಗರದ 22 ವರ್ಷದ ಯುವತಿ ಇಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸಲು ಆರಂಭಿಸಿದ್ದಾರೆ. ಇದೀಗ ಇಬ್ಬರೂ ಮದುವೆಯಾಗಿ ಪೊಲೀಸ್ ವಶಕ್ಕೊಳಗಾಗಿ ಪೇಚಿಗೆ ಸಿಲುಕಿದ್ದಾರೆ. ಬಾಲಕ ಎಸ್ಎಸ್ಎಲ್ ಸಿ ವಿದ್ಯಾರ್ಥಿಯಾಗಿದ್ದು, ಯುವತಿ ಉತ್ತರಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದಾಳೆ ಎನ್ನಲಾಗಿದೆ.
ಇವರಿಬ್ಬರೂ ಒಬ್ಬರಿಗೊಬ್ಬರು ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದಾರೆ. ಬಳಿಕ ಯಾವಾಗಲೂ ಚ್ಯಾಟಿಂಗ್ ಮಾಡುತ್ತಾ ಸ್ನೇಹ ಬೆಳೆದು ಪರಸ್ಪರ ಲವ್ ಆಗಿದೆ. ಆದರೆ ಈ ಬಗ್ಗೆ ಮನೆಯವರಿಗೆ ತಿಳಿದರೆ ಖಂಡಿತಾ ಮದುವೆಗೆ ಒಪ್ಪುವುದಿಲ್ಲ ಎಂದು ಅಂದುಕೊಂಡ ಇಬ್ಬರೂ ಉತ್ತರ ಪ್ರದೇಶಕ್ಕೆ ಹೋಗುವ ಯೋಜನೆ ಹಾಕಿದ್ದಾರೆ. ಅದರಂತೆ ಡಿ. 25ರಂದು ಮನೆಯಿಂದ ಓಡಿ ಹೋಗಿ ಮದುವೆಯನ್ನೂ ಮಾಡಿಕೊಂಡಿದ್ದಾರೆ.
ಮದುವೆಯ ಬಳಿಕ ವಾಪಸಾಗುತ್ತಿದ್ದ ವೇಳೆ ಅವರಿಬ್ಬರೂ ಮದುವೆ, ಓಡಿ ಬಂದಿರುವ ಬಗ್ಗೆ ಪರಸ್ಪರ ರೈಲಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಇದು ರೈಲಿನಲ್ಲಿದ್ದ ಅಕ್ಕಪಕ್ಕದವರಿಗೆ ಕೇಳಿಸಿಕೊಂಡು ಅವರಿಗೆ ಸಂದೇಹ ಬಂದಿದೆ. ಬಾಲಕ ಇನ್ನೂ ತೀರಾ ಚಿಕ್ಕವನಂತೆ ಕಾಣುತ್ತಿದ್ದುದರಿಂದ ಅವರಿಗೆ ಈ ಜೋಡಿಯ ಬಗ್ಗೆ ಸಂದೇಹ ವ್ಯಕ್ತವಾಗಿದೆ. ಅವರ ಮಾತಿನಿಂದಲೇ ಅವರಿಬ್ಬರೂ ಮದುವೆಯಾಗಿರುವುದೂ ತಿಳಿದು ಬಂದಿದೆ. ತಕ್ಷಣ ಅನುಮಾನದಿಂದ ಚೈಲ್ಡ್ಲೈನ್ಗೆ ಮಾಹಿತಿ ನೀಡಿದ್ದಾರೆ.
ಅದಾಗಲೇ ಇಬ್ಬರೂ ಕಾಣೆಯಾಗಿರುವ ಬಗ್ಗೆ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.