
ಭಾಷಣದ ವೇಳೆ ಲೇಡಿ ಪಿಎಸ್ಐ ಗುಸುಗುಸು ಮಾತು, ವೇದಿಕೆಯಲ್ಲಿ ಪೊಲೀಸರ ಓಡಾಟಕ್ಕೆ ಸಿಎಂ ಗರಂ: ನಿಮ್ಮವರ ಅಗತ್ಯವಿಲ್ಲ ಹೋಗಿ ಎಂದು ತರಾಟೆಗೆ
Monday, December 6, 2021
ಬೀದರ್: ವಿಧಾನ ಪರಿಷತ್ ಚುನಾವಣೆ ಪ್ರಚಾರಕ್ಕೆಂದು ಬೀದರ್‌ಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿಯವರು, ಮಹಿಳಾ ಪೊಲೀಸ್ ಮೇಲೆ ಗರಂ ಆಗಿರುವ ಘಟನೆ ನಡೆದಿದೆ.
ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಸಿಎಂ ಬೊಮ್ಮಾಯಿಯವರು ಭಾಷಣ ಮಾಡುತ್ತಿದ್ದಾಗ ಗಸ್ತಿನಲ್ಲಿದ್ದ ಮಹಿಳಾ ಪಿಎಸ್‌ಐಯೋರ್ವರು ಗುಸು ಗುಸು ಮಾತನಾಡುತ್ತಿರುವ ಶಬ್ದ ಕೇಳಿ ಸಿಎಂ ಕುಪಿತಗೊಂಡಿದ್ದಾರೆ. ಅಲ್ಲದೆ ಪೊಲೀಸರು ವೇದಿಕೆಯ ಮೇಲೆ ಸುತ್ತಾಡುತ್ತಿದ್ದರು. ಇದರಿಂದ ತಮ್ಮ ಭಾಷಣಕ್ಕೆ ಅಡ್ಡಿಯಾಗುತ್ತಿರುವುದನ್ನು ಮನಗಂಡು ಅಸಹನೆಯಿಂದ ಸಿಎಂ, ಕಾರ್ಯಕ್ರಮದಿಂದ ಹೋಗಲು ಹೇಳಿದ್ದಾರೆ.
"ನಮಗೆ ನಿಮ್ಮಗಳ ಅಗತ್ಯವಿಲ್ಲ, ನಮ್ಮ ಕಾರ್ಯಕರ್ತರು ಎಲ್ಲಾ ನೋಡಿಕೊಳ್ಳುತ್ತಾರೆ. ನಮ್ಮದು ಶಿಸ್ತಿನ ಪಕ್ಷ, ನೀವು ಹೊರಕ್ಕೆ ಹೋಗಿ" ಎಂದಿದ್ದಾರೆ. ಇಷ್ಟು ಹೇಳುತ್ತಿದ್ದಂತೆಯೇ ಮಹಿಳಾ ಪಿಎಸ್‌ಐ ವೇದಿಕೆಯಿಂದ ಕೆಳಕ್ಕಿಳಿದಿದ್ದಾರೆ. ಇದಕ್ಕೂ ಮುನ್ನ ಸಿಎಂ ಬೊಮ್ಮಾಯಿ ಅವರನ್ನು ಸನ್ಮಾನಿಸಲು ವೇದಿಕೆ ಬರುತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದರು.
ಆ ಬಳಿಕ ಈ ಮಹಿಳಾ ಪಿಎಸ್‌ಐ ವೇದಿಕೆ ಮೆಟ್ಟಿಲ ಮೇಲೆ ಅನವಶ್ಯಕವಾಗಿ ಸುತ್ತಾಡುತ್ತಿದ್ದರು. ಈ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸಿ ಕೊನೆಗೆ ಭಾಷಣದ ವೇಳೆಯಲ್ಲಿ ಪೊಲೀಸರನ್ನೇ ಸಿಎಂ ಹೊರಕ್ಕೆ ಹಾಕಿದ್ದಾರೆ.