
ಮಂಗಳೂರು; ಪತ್ನಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಭಯ- ಫ್ರೈಡ್ ರೈಸ್ ನಲ್ಲಿ ವಿಷ ಬೆರೆಸಿ ಹೆಂಡತಿ, ಮಕ್ಕಳನ್ನು ಕೊಂದ!
Wednesday, December 8, 2021
ಮಂಗಳೂರು; ಪತ್ನಿ ಮುಸ್ಲಿಂ ಧರ್ಮಕ್ಕೆ ಮತಾಂತರ ವಾಗುತ್ತಾಳೆ ಎಂಬ ಭಯ ದಿಂದ ಹೆಂಡತಿ ಮಕ್ಕಳಿಗೆ ವಿಷವುಣ್ಣಿಸಿ ಕೊಂದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದ ಮೋರ್ಗನ್ಸ್ ಗೇಟ್ ಸಮೀಪ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ್ ಗ್ರಾಮದ ನಾಗೇಶ್ ಶೇರಿಗುಪ್ಪ (30), ವಿಜಯಲಕ್ಷ್ಮಿ(26), ಸಪ್ನ (8) ಮತ್ತು ಸಮರ್ಥ್ (4) ಸಾವನ್ನಪ್ಪಿದವರು. ಇವರು ಮೋರ್ಗನ್ ಗೇಟ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನಾಗೇಶ್ ಶೇರಿಗುಪ್ಪ ಚಾಲಕನಾಗಿ ಕೆಲಸ ಮಾಡುತ್ತಿದ್ದರೆ ವಿಜಯಲಕ್ಷ್ಮಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ವಿಜಯಲಕ್ಷ್ಮಿ ಗೆ ಪತಿ ನಾಗೇಶ್ ಕಿರುಕುಳ ನೀಡುತ್ತಿದ್ದು ದಂಪತಿಗಳ ನಡುವೆ ವೈಮನಸ್ಸು ಇತ್ತು. ಇದರಿಂದಾಗಿ ಅಕ್ಟೋಬರ್ ತಿಂಗಳಲ್ಲಿ ವಿಜಯಲಕ್ಷ್ಮಿ ಮಕ್ಕಳೊಂದಿಗೆ ನಾಪತ್ತೆಯಾಗಿದ್ದಳು. ಬಳಿಕ ಆಕೆಯೆ ಬಂದು ಗಂಡನೊಂದಿಗೆ ವಾಸಿಸುತ್ತಿದ್ದಳು. ಈ ಸಂದರ್ಭದಲ್ಲಿ ಆಕೆ ಪತಿ ಹಿಂಸೆ ನೀಡುತ್ತಿದ್ದು ಅದಕ್ಕೆ ಮನೆಬಿಟ್ಟು ಸಂಬಂಧಿಕರ ಮನೆಗೆ ಹೋಗಿದ್ದೆ ಎಂದು ತಿಳಿಸಿದ್ದಳು.
ಈಕೆ ನೂರ್ ಜಹನ್ ಎಂಬ ಮಹಿಳೆಯೊಂದಿಗೆ ಕೆಲಸ ಮಾಡುತ್ತಿದ್ದು ಪತಿ ನಾಗೇಶ್ ಗೆ ಈಕೆ ಮುಸ್ಲಿಂ ಧರ್ಮಕ್ಕೆ ಮತಾಂತರ ವಾಗುವ ಭೀತಿ ಶುರುವಾಗಿದೆ. ಅವಳ ವರ್ತನೆಯನ್ನು ಗಮನಿಸಿ ಕೆಲಸಕ್ಕೆ ಹೋಗದಂತೆ ಸೂಚಿಸಿದ್ದಾನೆ. ಈ ವಿಚಾರದಲ್ಲಿ ಇಬ್ಬರ ನಡುವೆ ಕಲಹ ಶುರುವಾಗಿದೆ. ನಿನ್ನೆ ರಾತ್ರಿ ಫ್ರೈಡ್ ರೈಸ್ ಪಾರ್ಸೆಲ್ ತಂದಿದ್ದು ಅದಕ್ಕೆ ವಿಷ ಬೆರೆಸಿ ಪತ್ನಿ ಮತ್ತು ಮಕ್ಕಳಿಗೆ ನೀಡಿದ್ದಾನೆ. ಫ್ರೈಡ್ ರೈಸ್ ನಲ್ಲಿ ವಿಷವಿರುವುದು ತಿಳಿಯದೆ ತಿಂದ ಮೂವರು ಸಾವನ್ನಪ್ಪಿದ್ದು ಬಳಿಕ ಈತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಡೆತ್ ನೋಟ್ ಸಿಕ್ಕಿದ್ದು ಇದರಲ್ಲಿ ಈತ ಪತ್ನಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗುವ ಭೀತಿಯಿರುವುದರಿಂದ ಈ ಕೃತ್ಯ ಮಾಡಿರುವುದಾಗಿ ತಿಳಿಸಿದ್ದಾನೆ.