
ಕರಣ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಕರೀನಾ, ಅಮೃತಾ ಅರೋರಾಗೆ ಕೊರೊನಾ ಸೋಂಕು ದೃಢ: ಅವರ ಅಪಾರ್ಟ್‌ಮೆಂಟ್ ಗಳು ಸೀಲ್ ಡೌನ್
Thursday, December 16, 2021
ಮುಂಬೈ: ಸಿನಿಮಾ ನಿರ್ಮಾಪಕ ಕರಣ್ ಜೋಹರ್ ಪಾರ್ಟಿಯಲ್ಲಿ ಭಾಗವಹಿಸಿದ್ದ ನಟಿ ಮಣಿಯರಾದ ಕರೀನಾ ಕಪೂರ್ ಹಾಗೂ ಅಮೃತಾ ಅರೋರಾರಿಗೆ ಕೊರೊನಾ ಸೋಂಕು ದೃಢಗೊಂಡಿದೆ. ಇದೀಗ ಅವರು ಇರುವ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.
ನಟ ಸೊಹೈಲ್ ಖಾನ್ ಪತ್ನಿ ಸೀಮಾ ಖಾನ್ ಇರುವ ಕಿರಣ್ ಅಪಾರ್ಟ್‌ಮೆಂಟ್, ಕರೀನಾ ಕಪೂರ್ ಇರುವ ಸದ್ಗುರು ಶರಣ್, ಕರಣ್ ಜೋಹರ್ ಇರುವ ದಿ ರೆಸಿಡೆನ್ಸಿ, ಅಮೃತ ಅರೋರಾ ಇರುವ ಗವರ್ನಮೆಂಟ್ ಹೇರಿಟೇಜ್ ಅನ್ನು ಸೀಲ್ ಮಾಡಲಾಗಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕರಣ್ ಜೋಹರ್ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಇವರೆಲ್ಲರೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆದ್ದರಿಂದ ಸೋಂಕು ಕಾಣಿಸಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೀಗ ಪಾರ್ಟಿಯಲ್ಲಿ ಭಾಗವಹಿಸಿರುವ ಎಲ್ಲರೂ ತಪಾಸಣೆಗೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರಣ್ ಜೋಹರ್ ಅವರಿಗೂ ಈಗಾಗಲೇ ಕೊರೊನಾ ಸೋಂಕು ತಪಾಸಣೆ ಮಾಡಲಾಗಿದೆ. ಆದರೆ ಅವರ ವರದಿ ನೆಗೆಟಿವ್ ಬಂದಿದೆ. ಆದರೂ ಸದ್ಯ ಅವರನ್ನು ಹೋಂ ಐಸೋಲೇಷನ್‌ನಲ್ಲಿ ಇರುವಂತೆ ವೈದ್ಯರು ಹೇಳಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದ್ದ ಉಳಿದವರ ವರದಿ ಇನ್ನಷ್ಟೇ ಬರಬೇಕಿದೆ. ಅಲ್ಲದೆ ಈ ಎಲ್ಲರ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನೂ ತಪಾಸಣೆ ಮಾಡಲಾಗುತ್ತಿದೆ.