ಸ್ನೇಹಿತನೊಂದಿಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ ತಂದೆಗೆ ಸಿಕ್ಕಿಬಿದ್ದ ಬಾಲಕಿ: ತಪ್ಪಿಸಿಕೊಳ್ಳಲು ಆರನೇ ಮಹಡಿಯಿಂದ ಜಿಗಿದು ಜೀವನ್ಮರಣ ಸ್ಥಿತಿಗೆ
Wednesday, December 22, 2021
ಮುಂಬೈ: ಸ್ನೇಹಿತನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಬಾಲಕಿಯೋರ್ವಳು, ತಂದೆ ಗಮನಿಸಿದರೆಂದು ಹೆದರಿ 6ನೇ ಮಹಡಿಯಿಂದ ಹಾರಿ ಮಾರಣಾಂತಿಕವಾಗಿ ಗಾಯಗೊಂಡು ಜೀವನ್ಮರಣ ಸ್ಥಿತಿಯಲ್ಲಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮುಂಬೈನ ವೆರ್ ಸೋವಾ ನಿವಾಸಿಯಾಗಿರುವ 16ರ ವಯಸ್ಸಿನ ಬಾಲಕಿ ಈಗ ಜೀವನ್ಮರಣ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾಳೆ. 6ನೇ ಮಹಡಿಯಲ್ಲಿ ಹೆತ್ತವರೊಂದಿಗೆ ವಾಸವಾಗಿದ್ದ ಈ ಬಾಲಕಿ ಸ್ನೇಹಿತನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದಳು.
ಇವರಿಬ್ಬರೂ ಪ್ರೀತಿ-ಪ್ರೇಮದ ವಿಚಾರವಾಗಿ ಮಾತನಾಡುತ್ತಿರುವುದನ್ನು ಆಕೆಯ ತಂದೆ ಹೊರಗೆ ನಿಂತು ಕೇಳಿಸಿಕೊಂಡಿದ್ದಾರೆ. ಆತ ಈ ಬಗ್ಗೆ ಮಗಳಿಗೆ ಗದರಿಸಲೆಂದು ಹತ್ತಿರ ಬಂದಿದ್ದಾರೆ. ಇದನ್ನು ನೋಡಿದ ಬಾಲಕಿ ತಂದೆ ಏನಾದರೂ ಮಾಡಬಹುದೆಂದು ಭೀತಿಗೊಳಗಾಗಿದ್ದಾಳೆ. ಪರಿಣಾಮ ಅಲ್ಲಿಯೇ ಇದ್ದ ತಾಯಿಯ ಸೀರೆಯನ್ನು ಕಿಟಕಿಗೆ ಕಟ್ಟಿ ಅಲ್ಲಿಂದ ಇಳಿಯಲು ಪ್ರಯತ್ನಿಸಿದ್ದಾಳೆ. ಆದರೆ ಭಯದಲ್ಲಿ ಇಳಿಯುತ್ತಿದ್ದುದರಿಂದ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.
ಕೂಡಲೇ ಸ್ಥಳೀಯರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಬಾಲಕಿಯ ಬೆನ್ನುಮೂಳೆಗೆ ಗಂಭೀರವಾಗಿ ಏಟು ತಗುಲಿರುವುದರಿಂದ, ಆಕೆ ಬದುಕಿ ಉಳಿಯುವ ಸಾಧ್ಯತೆ ಕಡಿಮೆ ಇರುವುದಾಗಿ ವೈದ್ಯರು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.