ಪ್ರಖ್ಯಾತ ನಟನಿಗೆ ಆ್ಯಪಲ್ ವಾಚ್ ಬದಲಾಗಿ ಡೆಲಿವರಿಯಾಯ್ತು ಕಲ್ಲು: ಕಂಪೆನಿಗೆ ದಂಡ ವಿಧಿಸಿದ ಕೋರ್ಟ್
Wednesday, December 22, 2021
ನವದೆಹಲಿ: ಆನ್ಲೈನ್ನಲ್ಲಿ ಆರ್ಡರ್ ಮಾಡಿರುವ ಪ್ರಾಡಕ್ಟ್ ಗಳಿಗೆ ಬದಲಾಗಿ ಬೇರೆ ಪ್ರಾಡಕ್ಟ್ ಬರುವ ಬಹಳ ಉದಾಹರಣೆಗಳನ್ನು ನಾವು ನೋಡುತ್ತಲೇ ಇರುತ್ತೇವೆ. ಯಾವುದೋ ದುಬಾರಿ ಪ್ರಾಡಕ್ಟ್ಸ್ ಬದಲಾಗಿ ಸೋಪು, ಕಲ್ಲು ಮುಂತಾದವುಗಳನ್ನು ಪಾರ್ಸೆಲ್ ಬರುವುದು ಸುದ್ದಿಯಾಗುತ್ತಲೇ ಇರುತ್ತದೆ.
ಇಂತಹ ಕಹಿ ಅನುಭವ ಜನಸಾಮಾನ್ಯರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳಿಗೂ ಆಗುತ್ತಿರುತ್ತದೆ. ಸೆಲೆಬ್ರಿಟಿಗಳು ಕೂಡಾಇದಕ್ಕೆ ಹೊರತಾಗಿರೋಲ್ಲ ಎಂಬುದು ಈ ಸುದ್ದಿಯೇ ಸಾಕ್ಷಿ. ಪ್ರಖ್ಯಾತ ಬ್ರೆಜಿಲಿಯನ್ ಕಲಾವಿದರೊಬ್ಬರಿಗೆ ಆನ್ಲೈನ್ ಶಾಪಿಂಗ್ ವೇಳೆ ಕಹಿ ಅನುಭವವಾಗಿದೆ. ಅವರು ದುಬಾರಿ ಆ್ಯಪಲ್ ವಾಚ್ ಬುಕ್ ಮಾಡಿದ್ದರು ಆದರೆ ಕಲ್ಲು ಪಾರ್ಸೆಲ್ ಬಂದಿದೆ. ಈ ಬಗ್ಗೆ ಅವರು ನ್ಯಾಯಾಲಯದ ಮೆಟ್ಟಲೇರಿದ್ದರು.
ಪ್ರಖ್ಯಾತ ಕಲಾವಿದ ಮುರಿಲ್ಲೋ ಬೆನಿಸಿಯೋ (50) ಆನ್ಲೈನ್ನಲ್ಲಿ ಆ್ಯಪಲ್ 6ನೇ ಸರಣಿಯ ಸ್ಮಾರ್ಟ್ವಾಚ್ ಅನ್ನು ಬುಕ್ ಮಾಡಿದ್ದರು. ಅದಕ್ಕಾಗಿ ಅವರು 530 ಡಾಲರ್ (40 ಸಾವಿರ ರೂ.) ಪಾವತಿಸಿದ್ದರು. ಬುಕ್ ಮಾಡಿದ 12 ದಿನಗಳ ಬಳಿಕ ಅವರಿಗೆ ವಾಚ್ ಪಾರ್ಸೆಲ್ ಡೆಲಿವರಿಯಾಗಿದೆ. ಖುಷಿಯಿಂದಲೇ ಬಾಕ್ಸ್ ತೆರೆದ ಕಲಾವಿದ ಮುರಿಲ್ಲೋ ಬೆನಿಸಿಯೋ ಆಘಾತವಾಗಿದೆ. ಯಾಕೆಂದರೆ, ಅವರಿಗೆ ವಾಚ್ ಬದಲಿಗೆ ಕಲ್ಲು ಡೆಲಿವರಿಯಾಗಿತ್ತು.
ಈ ಬಗ್ಗೆ ಮುರಿಲ್ಲೋ ಬೆನಿಸಿಯೋ ಅವರು ಕೊರ್ರೆಫೊರ್ ಹೆಸರಿನ ಆನ್ಲೈನ್ ಕಂಪೆನಿಯನ್ನು ಸಂಪರ್ಕಿಸಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕಂಪೆನಿ ನಿರಾಕರಿಸಿದೆ. ಇದರಿಂದ ರೋಸಿಹೋದ ಮುರಿಲ್ಲೋ ಬೆನಿಸಿಯೋ ಕಂಪೆನಿಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು.
ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿಯಾಗಿರುವ ಓರ್ವ ಸೆಲೆಬ್ರಿಟಿಗೆ, ಸ್ಟಾರ್ ಹೀರೋಗೆ ಕಿರುಕುಳ ನೀಡುವುದು ಸರಿಯಲ್ಲ ಎಂದು ಅವರ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದು, ಕೊನೆಗೆ ಬೆನಿಸಿಯೋ ಅವರು ಕೇಸ್ ಗೆದ್ದಿದ್ದಾರೆ. ಮೊದಲೇ ಪಾವತಿಸಿದ್ದ 530 ಡಾಲರ್ಗೆ ಹೆಚ್ಚುವರಿಯಾಗಿ 1500 ಡಾಲರ್ ಕೊಡುವಂತೆ ಕೋರ್ಟ್ ಕಂಪೆನಿಗೆ ಆದೇಶಿಸಿದೆ.