ಬೆಂಗಳೂರು ಆನೇಕಲ್ನಲ್ಲಿ ಡಬಲ್ ಮರ್ಡರ್: ಮಾಜಿ ಗ್ರಾಪಂ ಅಧ್ಯಕ್ಷ ಸಹಿತ ಮತ್ತೋರ್ವ ಮಹಿಳೆಯ ಮೃತದೇಹ ಪತ್ತೆ
Saturday, December 11, 2021
ಆನೇಕಲ್: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ರಾಮಯ್ಯ ಬಡಾವಣೆಯಲ್ಲಿ ಜೋಡಿ ಕೊಲೆ ನಡೆದ ಘಟನೆ ನಡೆದಿದೆ. ಪಕ್ಷವೊಂದರ ಮುಖಂಡ, ಬ್ಯಾಗಡದೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ ತಮ್ಮ ಪ್ರೇಯಸಿಯೊಂದಿಗೆ ಬಾಡಿಗೆ ಮನೆಯಲ್ಲಿದ್ದ ಕೊಲೆಯಾಗಿದ್ದಾರೆ ಎನ್ನಲಾಗಿದೆ.
ಇವರಿಬ್ಬರು ಮನೆಯಲ್ಲಿದ್ದ ಸಂದರ್ಭ ನಾರಾಯಣ ಸ್ವಾಮಿಯವರ ಪ್ರೇಯಸಿ ಪತಿ ಇಬ್ಬರನ್ನು ಕೊಚ್ಚಿ ಕೊಲೆಗೈದು, ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಕೆ ಡಾಭಾ ಮುಂಭಾಗದ ರಸ್ತೆಯ ಪಕ್ಕದಲ್ಲಿರುವ ಶೀಟ್ ಮನೆಯಲ್ಲಿ ಇವಬ್ಬರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಬ್ಯಾಗಡದೇನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ನಾರಾಯಣಸ್ವಾಮಿಗೆ ತನ್ನನ್ನು ಕೊಲೆ ಮಾಡಲಾಗುತ್ತಿದೆ ಎಂಬ ಸುಳಿವು ಸಿಗುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಅವರು ತಪ್ಪಿಸಲು ಪ್ರಯತ್ನಿಸಲು ಯತ್ನಿಸುತ್ತಿದ್ದ ವೇಳೆ ಬಾಗಿಲ ಬಳಿಯೇ ಅವರ ಕೊಲೆ ಮಾಡಲಾಗಿದೆ. ಒಳಗಡೆ ಅವರ ಪ್ರೇಯಸಿ ಕಾವ್ಯಾರನ್ನು ಹತ್ಯೆ ಮಾಡಲಾಗಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಘಟನಾ ಸ್ಥಳಕ್ಕೆ ಎಎಸ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ಪಿ ಎಂ ಮಲ್ಲೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.