ಮ್ಯಾಟ್ರಿಮೊನಿ ಸೈಟ್ ನಲ್ಲಿ ಪರಿಚಯವಾಗಿ ವಿವಾಹವಾದಾತ ಲಕ್ಷಾಂತರ ರೂ. ಹಣ, ಚಿನ್ನಾಭರಣಗಳೊಂದಿಗೆ ಪರಾರಿ
Wednesday, December 22, 2021
ಬೆಂಗಳೂರು: ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಮಹಿಳೆಯೋರ್ವರ ಪರಿಚಯ ಮಾಡಿಕೊಂಡು, ಸ್ನೇಹ ಬೆಳೆಸಿಕೊಂಡಾತ ಆಕೆಯನ್ನು ಮದುವೆ ಮಾಡಿಕೊಂಡು ಬಳಿಕ ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಶಾದಿ ಡಾಟ್ ಕಾಮ್ ವೆಬ್‌ಸೈಟ್ ಮೂಲಕ ಪರಿಚಯ ಮಾಡಿಕೊಂಡು ಮೋಸ ಮಾಡಿದ ಆರೋಪಿಯೇ ತಹ್ಸೀನ್ ಅಹ್ಮದ್. ಆತನಿಂದ ತನಗೆ ನ್ಯಾಯ ಕೊಡಿಸುವಂತೆ ಪತ್ನಿ ರಿಹಾನಾ ಬೇಗಂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ರಿಹಾನಾ ಬೇಗಂನನ್ನು ಪರಿಚಯ ಮಾಡಿಕೊಂಡ ತಹ್ಸೀನ್ ಅಹ್ಮದ್ ಆಕೆಯನ್ನು ಮದುವೆ ಆಗುತ್ತೇನೆಂದು ನಂಬಿಸಿ ನಿಖಾಃ ಮಾಡಿಕೊಂಡದ್ದಾನೆ. ಮದುವೆಯಾದ ಬಳಿಕವೂ ಆತ ಪತ್ನಿಯನ್ನು ತನ್ನ ಮನೆಗೂ ಕರೆದುಕೊಂಡು ಹೋಗಿರಲಿಲ್ಲ. ಬದಲಿಗೆ ಆತ ಮನೆ ನಿರ್ಮಾಣವಾಗುತ್ತಿರುವುದರಿಂದ ಪತ್ನಿಯ ಮನೆಯಲ್ಲಿಯೇ ಉಳಿದುಕೊಂಡಿದ್ದಾನೆ.
ಪತಿಯನ್ನು ನಂಬಿದ ರಿಹಾನಾ ತಮ್ಮ ತವರಿನಲ್ಲಿಯೇ ಪತಿಯನ್ನೂ ಉಳಿಸಿಕೊಂಡಿದ್ದಾರೆ. ವಿವಾಹವಾದ ಒಂದು ತಿಂಗಳಿಗೆ ತನಗೆ ಸ್ವಂತ ಉದ್ಯಮ ಆರಂಭಿಸಲು ಹಣ ನೀಡುವಂತೆ ಪತ್ನಿಯನ್ನು ತಹ್ಸೀನ್ ಅಹ್ಮದ್ ಒತ್ತಾಯಿಸುತ್ತಿದ್ದನಂತೆ. ನಿತ್ಯವೂ ಹಣಕ್ಕಾಗಿ ಪತಿ ಒತ್ತಾಯಿಸುತ್ತಿದ್ದದಿಂದ ರಿಹಾನಾ 2 ಲಕ್ಷ ರೂ. ನಗದು ಹಾಗಯ 6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನೀಡಿದ್ದಾರೆ.
ಆದರೆ ಹಣ ಹಾಗೂ ಚಿನ್ನಾಭರಣದೊಂದಿಗೆ ಹೋಗಿರುವ ಪತಿಮಹಾಶಯ ಮತ್ತೆ ವಾಪಸ್ ಮನೆಗೆ ಬರಲೇ ಇಲ್ಲ. ಇದರಿಂದ ಗಾಬರಿಗೊಂಡ ರಿಹಾನಾ ಪತಿಗಾಗಿ ಎಲ್ಲಾ ಕಡೆಯೂ ಹುಡುಕಾಡಿದ್ದಾರೆ. ಆ ಬಳಿಕ ಆಕೆಗೆ ತಾವು ಮೋಸ ಹೋಗಿರುವುದು ತಿಳಿದಿದೆ.
ತಕ್ಷಣ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರನ್ನು ಪಡೆದ ಪೊಲೀಸರು ತಹ್ಸೀನ್ ಅಹ್ಮದ್ ಹಿನ್ನೆಲೆಯನ್ನು ಕೆದಕಿದಾಗ ಇದೇ ರೀತಿ ಈತ ಹಲವು ಮಹಿಳೆಯರಿಗೆ ಮೋಸ ಮಾಡಿರುವುದು ಬಯಲಿಗೆ ಬಂದಿದೆ. ಇದೇ ರೀತಿ ಆತ ಮದುವೆಯ ಹೆಸರಿನಲ್ಲಿ ಐದಾರು ಮಹಿಳೆಯರಿಗೆ ಮೋಸ ಮಾಡಿರುವುದು ತಿಳಿದು ಬಂದಿದೆ. ದೂರು ದಾಖಲಾಗಿ ಎರಡು ವರ್ಷಗಳಾದರೂ ಇದುವರೆಗೆ ಆತನನ್ನು ಹುಡುಕುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ರಿಹಾನಾ ಇದೀಗ ಈ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.