
ಫೇಸ್ ಬುಕ್ ಪ್ರಿಯತಮನಿಗಾಗಿ ಮದುವೆಯ ಹಿಂದಿನ ದಿನವೇ ಹರಿದ್ವಾರದಿಂದ ತಮಿಳುನಾಡಿಗೆ ಎಸ್ಕೇಪ್ ಆದ ವಧು: ಮುಂದೇನಾಯ್ತು ಗೊತ್ತೇ?
Thursday, December 9, 2021
ಚೆನ್ನೈ: ಎಫ್ ಬಿಯಲ್ಲಿ ಪರಿಚಯವಾಗಿದ್ದ ಯುವಕನೋರ್ವನನ್ನು ಪ್ರೀತಿಸುತ್ತಿದ್ದ ಉತ್ತರಾಖಾಂಡ, ಹರಿದ್ವಾರ ಮೂಲದ ಯುವತಿಯೊಬ್ಬಳು ಮದುವೆಯ ಹಿಂದಿನ ದಿನ ಮನೆಯಿಂದ ಪರಾರಿಯಾಗಿ ಪ್ರಿಯತಮನನ್ನು ಹುಡುಕಿಕೊಂಡು ತಮಿಳುನಾಡಿಗೆ ಬಂದಿರುವ ಘಟನೆ ನಡೆದಿದೆ.
ಹರಿದ್ವಾರದ ಈ ಯುವತಿಗೆ ಫೇಸ್‌ಬುಕ್‌ನಲ್ಲಿ ಚೆನ್ನೈನ ಯುವಕನ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದೆ. ಬಳಿಕ ಇವರೀರ್ವರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಯುವತಿಯ ಹೆತ್ತವರು ಆಕೆಗೆ ಬೇರೆ ಯುವಕನೊಂದಿಗೆ ಮದುವೆ ಗೊತ್ತುಮಾಡಿದ್ದಾರೆ.
ಮದುವೆಯ ಮುಹೂರ್ತ ಕೂಡ ನಿಗದಿಯಾಗಿತ್ತು. ಇದರಿಂದ ಆತಂಕಿಳಾದ ಯುವತಿ, ಮದುವೆಯ ಹಿಂದಿನ ದಿನವೇ ಮನೆ ಬಿಟ್ಟು ಓಡಿಬಂದು ರೈಲಿನಲ್ಲಿ ತಮಿಳುನಾಡಿಗೆ ಬಂದುಬಿಟ್ಟಿದ್ದಾಳೆ. ಅತ್ತ ಮದುಮಗಳು ನಾಪತ್ತೆಯಾಗಿರುವುದರಿಂದ ಮನೆಯವರು ಗಾಬರಿಯಾಗಿದ್ದಾರೆ. ಎಲ್ಲಿಯೂ ಆಕೆ ಸಿಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ವಿಚಾರಣೆ ನಡೆಸಿದ ವೇಳೆ ಆಕೆ ಸದಾ ಮೊಬೈಲ್‌ನಲ್ಲಿ ತಲ್ಲೀನ ಆಗಿರುವುದು, ಆಗ ಆಕೆಯ ನಡವಳಿಕೆಯಲ್ಲಿ ಬದಲಾವಣೆ ಆಗುತ್ತಿರುವುದನ್ನು ಆಕೆಯ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆಕೆಯ ಫೇಸ್ಬುಕ್ ಅಕೌಂಟ್ ಅನ್ನು ಚೆಕ್ ಮಾಡಿದ್ದಾರೆ. ಆಗ ಆಕೆ ತಮಿಳುನಾಡಿನ ಯುವಕನೋರ್ವನೊಂದಿಗೆ ಪ್ರೀತಿಯ ಮಾತುಕತೆ ನಡೆಸಿರುವುದು ತಿಳಿದಿದೆ. ಇದರ ಆಧಾರದ ಮೇಲೆ ಪೊಲೀಸರು ಸಾಕಷ್ಟು ತನಿಖೆ ನಡೆಸಿ, ತಮಿಳುನಾಡಿನಲ್ಲಿರುವ ಆ ಯುವಕನ ಮನೆಯನ್ನು ಪತ್ತೆ ಮಾಡಿ, ಅಲ್ಲಿಗೆ ತೆರಳಿ ಯುವತಿಯನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ.