![ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ತಾಯಿಗೆ ಕಾದಿತ್ತು ಶಾಕ್! ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ತಾಯಿಗೆ ಕಾದಿತ್ತು ಶಾಕ್!](https://blogger.googleusercontent.com/img/b/R29vZ2xl/AVvXsEgRu3j3TBKX_xCzgx7aT1VTHTVYnPZHhxn0RGFtrryGZ38BBZyEzBxOpBTVOkCTPVKRULHmHWZOdioB-IEihrif7UDm3_vnY069olY8QMTCkIlfy9K1V_Zsde0mU9eTnIi__YtYHSjXrkuY/s1600/1638501129476818-0.png)
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ತಾಯಿಗೆ ಕಾದಿತ್ತು ಶಾಕ್!
Friday, December 3, 2021
ಹೈದರಾಬಾದ್: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದ ತಾಯಿಗೆ ಭಾರೀ ದೊಡ್ಡ ಶಾಕ್ ಆಗಿ ಕಾದಿತ್ತು. ಮಗಳನ್ನು ತಪಾಸಣೆ ಮಾಡಿದ ವೈದ್ಯರು ಹೇಳಿರುವ ವಿಚಾರದಿಂದ ತಾಯಿಗೆ ಭೂಮಿಯೇ ಬಾಯಿ ಬಿರಿದು ತನ್ನನ್ನೊಮ್ಮೆ ಕೊಂಡೊಯ್ಯಬಾರದೇ ಎನ್ನುವಂತಾದದ್ದು ಸತ್ಯ. ಏಕೆಂದರೆ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಆಕೆಯ ಪುತ್ರಿಯ ಬಾಳಿನಲ್ಲಿ ನಡೆದುಹೋಗಿದೆ.
ಈ ಘಟನೆ ನಡೆದಿದ್ದು, ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ. ವಿಕಾರಾಬಾದ್ ನ ಮೊಮಿನ್ಪೇಟ್ ಮಂಡಲದ ವ್ಯಕ್ತಿಯೋರ್ವನಿಗೆ ಮೂವರು ಮಕ್ಕಳಿದ್ದಾರೆ. ಈತ ತನ್ನ ಮಕ್ಕಳಿಗೆ ಮೊಮ್ಮಿನ್ಪೇಟ್ನಲ್ಲೇ ಶಿಕ್ಷಣ ಕೊಡಿಸುತ್ತಿದ್ದ. ಆದರೆ ಆತ ತನ್ನ ಪತ್ನಿಯೊಂದಿಗೆ ಪಟಂಚೆರುವಿನ ಫಾರ್ಮ್ ಹೌಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ.
ಲಾಕ್ಡೌನ್ ಸಂದರ್ಭದಲ್ಲಿ ತನ್ನ ಮಕ್ಕಳನ್ನು ತಾವಿದ್ದಲ್ಲಿಗೆ ಕರೆಸಿಕೊಂಡಿದ್ದ. ಈ ಸಂದರ್ಭ ಆತನ ಕಾಮದ ದೃಷ್ಟಿ 8ನೇ ತರಗತಿ ಓದುತ್ತಿದ್ದ ಹಿರಿಯ ಪುತ್ರಿಯ ಮೇಲೆಯೇ ಬಿದ್ದಿದೆ. ಈತ ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ತನ್ನ ಮಗಳನ್ನು ಬೆದರಿಸಿ ತನ್ನ ಕಾಮತೃಷೆಗೆ ಪಾಪಿ ತಂದೆ ಬಳಸಿಕೊಂಡಿದ್ದಾನೆ. ಅಲ್ಲದೆ ಯಾರಿಗಾದರೂ ಹೇಳಿದ್ದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಇತ್ತೀಚೆಗೆ ಮಗಳ ಆರೋಗ್ಯದಲ್ಲಿ ಏರುಪೇರು ಕಂಡಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಕರೆದುಕೊಂಡು ತಾಯಿ ಆಸ್ಪತ್ರೆಗೆ ಬಂದಿದ್ದಾಳೆ. ಮಗಳನ್ನು ತಪಾಸಣೆ ಮಾಡಿದ ವೈದ್ಯರು ನಿಮ್ಮ ಮಗಳೀಗ ಮೂರು ತಿಂಗಳ ಗರ್ಭಿಣಿ ಎಂದು ಹೇಳಿದ್ದಾರೆ.
ಬಳಿಕ ಬಾಲಕಿಯಲ್ಲಿ ಈ ಬಗ್ಗೆ ವಿಚಾರಿಸಿದಾಗ ತಂದೆಯ ದುಷ್ಕೃತ್ಯ ಬಯಲಾಗಿದೆ. ತಂದೆಯೇ ಮಗಳನ್ನು ದುರ್ಬಳಕೆ ಮಾಡಿಕೊಂಡಿರುವ ಬಯ ತಿಳಿದ ತಾಯಿ ಪತಿಯನ್ನು ಪ್ರಶ್ನಿಸಿದಾಗ, 'ಯಾರಿಗಾದರೂ ಈ ವಿಚಾರವನ್ನು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಗರ್ಭಪಾತ ಮಾಡಿಸುವಂತೆ ಪತ್ನಿಯ ಕೈಯಲ್ಲಿ 20 ಸಾವಿರ ರೂ. ಹಣವನ್ನು ನೀಡಿದ್ದಾನೆ.
ಅದರಂತೆ ತಾಯಿ ಪುತ್ರಿಯನ್ನು ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡುವಂತೆ ವೈದ್ಯರ ಬಳಿ ಕೇಳಿಕೊಂಡಿದ್ದಾಳೆ. ಅಲ್ಲದೆ, ಮಗಳ ಈ ಸ್ಥಿತಿಗೆ ಕಾರಣವಾದ ಗಂಡನ ಮೇಲೆಯೂ ಆಕೆ ದೂರು ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪಟಂಚೆರುವಿನ ಪೊಲೀಸರು ತನಿಖೆ ಆರಂಭಿಸಿದ್ದಾರೆ.