ಆಂಧ್ರಪ್ರದೇಶದಲ್ಲಿ ತೆಲಂಗಾಣ ಥಿಯೇಟರ್ ಪಾರ್ಕಿಂಗ್ ದರಕ್ಕಿಂತಲೂ ಕಡಿಮೆ ಸಿನಿಮಾ ಟಿಕೆಟ್ ದರ: ಸರಕಾರದ ವಿರುದ್ಧ ಕೋರ್ಟ್ ಮೆಟ್ಟಲು ಹತ್ತಿದ ತೆಲುಗು ಚಿತ್ರೋದ್ಯಮ
Sunday, December 26, 2021
ವಿಜಯವಾಡ: ಸಿನಿಮಾ ಟಿಕೆಟ್ ದರ ನಿಗದಿ ವಿಚಾರವಾಗಿ ಆಂಧ್ರಪ್ರದೇಶ ಸರಕಾರ ಹಾಗೂ ತೆಲುಗು ಚಿತ್ರೋದ್ಯಮದ ನಡುವಿನ ತೆರೆಮರೆಯ ಹೋರಾಟ ಮತ್ತೂ ಮುಂದುವರಿದಿದೆ. ಈ ಮೂಲಕ ಆಂಧ್ರ ಸರಕಾರ ತೆಲುಗು ಚಿತ್ರೋದ್ಯಮವನ್ನು ದಮನ ಮಾಡುವ ನೀತಿಯನ್ನು ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದೀಗ ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಫೋಟೋವೊಂದು ವೈರಲ್ ಆಗಿದೆ.
ವೈರಲ್ ಆಗಿರುವ ಆ ಫೋಟೋದಲ್ಲಿ ತೆಲಂಗಾಣದ ಸಿನಿಮಾ ಟಿಕೇಟ್ ದರ, ಪಾರ್ಕಿಂಗ್ ದರ ಹಾಗೂ ಆಂಧ್ರಪ್ರದೇಶದ ಸಿನಿಮಾ ಟಿಕೆಟ್ ದರವನ್ನು ಹೋಲಿಕೆ ಮಾಡಲಾಗಿದೆ. ಆಂಧ್ರಪ್ರದೇಶ ರಾಜ್ಯದ ಸಿನಿಮಾ ಟಿಕೆಟ್ ದರಕ್ಕಿಂತ ತೆಲಂಗಾಣದ ಸಿನಿಮಾ ಮಂದಿರದ ಪಾರ್ಕಿಂಗ್ ದರವೇ ಅಧಿಕವಿದೆ.
ತೆಲಂಗಾಣದ ಚಿತ್ರಮಂದಿರಗಳಲ್ಲಿ ವಾಹನ ಪಾರ್ಕಿಂಗ್ ದರ 30 ರೂ. ಇದ್ದರೆ, ಆಂಧ್ರದಲ್ಲಿ ಟಿಕೆಟ್ ಬೆಲೆ ಬಾಲ್ಕನಿ 20, ಫಸ್ಟ್ ಕ್ಲಾಸ್ 15 ಹಾಗೂ ಸೆಕೆಂಡ್ ಕ್ಲಾಸ್ 10 ರೂ. ಇದೆ. ಆಂಧ್ರಪ್ರದೇಶ ಸರಕಾರವು ಸಿನಿಮಾ ಟಿಕೆಟ್ ಬೆಲೆ ಇಳಿಸಿರುವ ಪರಿಣಾಮ ಮೂಲ ಖರ್ಚು ವೆಚ್ಚವನ್ನು ಸಹ ಮರುಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ಸರಕಾರದ ಈ ನೀತಿಯನ್ನು ಖಂಡಿಸಿ ಕಡಿಮೆ ಟಿಕೆಟ್ ದರ ನಿಗದಿ ಮಾಡಿರುವ ಆಂಧ್ರದದಲ್ಲಿ ಅನೇಕ ಸಿನಿಮಾ ಮಂದಿರಗಳನ್ನು ಬಂದ್ ಮಾಡಲಾಗಿದೆ. ಟಿಕೆಟ್ ದರ ಮಾತ್ರವಲ್ಲದೆ, ಸಿನಿಮಾ ಹಾಲ್ ಸುರಕ್ಷತಾ ಕ್ರಮಗಳ ಬಗ್ಗೆಯೂ ಸರ್ಕಾರ ಕಟ್ಟುನಿಟ್ಟಾದ ಕ್ರಮ ತೆಗೆದುಕೊಂಡಿದೆ. ಜೊತೆಗೆ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಪಾಲಿಸದ 15 ಸಿನಿಮಾ ಮಂದಿರಗಳನ್ನು ಸರ್ಕಾರ ಸೀಜ್ ಮಾಡಿದೆ.
ಆಂಧ್ರಪ್ರದೇಶ ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ತೆಲುಗು ಚಿತ್ರೋದ್ಯಮ ಕೋರ್ಟ್ ಮೆಟ್ಟಿಲೇರಿದೆ. ಅಲ್ಲದೆ, ನಾನಿ ಸೇರಿದಂತೆ ಅನೇಕ ನಟರು ಸರ್ಕಾರದ ಕ್ರಮವನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಸದ್ಯ ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಆರ್ಆರ್ಆರ್ ಮತ್ತು ರಾಧೆ ಶ್ಯಾಮ್ ಸಿನಿಮಾ ಗಳಿಕೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎನ್ನಲಾಗುತ್ತಿದೆ.