
ಪ್ರೇಯಸಿಗೆ ದುಬಾರಿ ಗಿಫ್ಟ್ ನೀಡಲೆಂದು ಚಿನ್ನದಂಗಡಿಯಲ್ಲಿ ಕಳವು ಕೃತ್ಯ ಎಸಗಿದ ಎಂಬಿಬಿಎಸ್ ವಿದ್ಯಾರ್ಥಿ: ಆತನೊಂದಿಗೆ ಸ್ನೇಹಿತನೂ ಅಂದರ್
Thursday, December 16, 2021
ಪುಣೆ: ಪ್ರೇಯಸಿಗೆ ಉಡುಗೊರೆ ನೀಡಲೆಂದು ಎಂಬಿಬಿಎಸ್ ವಿದ್ಯಾರ್ಥಿಯೋರ್ವನು ಚಿನ್ನದ ಅಂಗಡಿಯಲ್ಲಿ ಉಂಗುರ ಎಗರಿಸಿ ಸಿಕ್ಕಿಬಿದ್ದಿರುವ ಘಟನೆ ಪುಣೆಯಲ್ಲಿ ನಡೆದಿದೆ.
ಎರಡು ಚಿನ್ನದಂಗಡಿಯಲ್ಲಿ ಚಿನ್ನದ ಉಂಗುರು ಕಳವುಗೈದಿರುವ ಈತನನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪುಣೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಬಿಬಿಎಸ್ 3ನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಹನುಮಂತ ರೋಖಡೆ ಇಂಥದ್ದೊಂದು ಕೃತ್ಯ ಎಸಗಿರುವ ಆರೋಪಿ.
ಹನುಮಂತ ರೋಖಡೆ ತನ್ನ ಸ್ನೇಹಿತ ವೈಭವ್ ಸಂಜಯ್ ನೊಂದಿಗೆ ಕಳವು ಕೃತ್ಯ ಎಸಗಿ ಸಿಕ್ಕಿಬಿದ್ದಿದ್ದಾನೆ. ಪ್ರೀತಿಪಾಶದ ಬಲೆಗೆ ಸಿಲುಕಿದ್ದ ಹನುಮಂತ ರೋಖಡೆ ತನ್ನ ಪ್ರೇಯಸಿಯನ್ನು ಓಲೈಸಲು ದುಬಾರಿ ಗಿಫ್ಟ್ ನೀಡಲು ಮುಂದಾಗಿದ್ದಾನೆ. ಆದರೆ ಅಷ್ಟೊಂದು ಹಣ ಈತನ ಬಳಿ ಇರಲಿಲ್ಲ. ಅದಕ್ಕಾಗಿ ಚಿನ್ನದಂಗಡಿಗೆ ಗ್ರಾಹಕನ ಸೋಗಿನಲ್ಲಿ ಹೋಗಿ ಕದಿಯುವ ಪ್ಲ್ಯಾನ್ ಮಾಡಿದ್ದಾನೆ.
ಈ ಬಗ್ಗೆ ತನ್ನ ಸ್ನೇಹಿತ ವೈಭವ್ ಜತೆ ಚರ್ಚೆ ಮಾಡಿದ್ದು, ಅದಕ್ಕೆ ಅವನೂ ಒಪ್ಪಿಕೊಂಡಿದ್ದಾನೆ. ಮಾಡಿರುವ ಪ್ಲ್ಯಾನ್ ನಂತೆ ಇಬ್ಬರೂ ಚಿನ್ನದ ಅಂಗಡಿಯಲ್ಲಿ ಉಂಗುರ ತೋರಿಸಲು ಹೇಳಿದ್ದಾರೆ. ಉಂಗುರಗಳನ್ನು ಅಂಗಡಿಯಾತ ಮುಂದಿಟ್ಟಿದ್ದಾನೆ. ಅವುಗಳನ್ನು ಹಾಕಿ ನೋಡುವಂತೆ ನಟಿಸಿದ್ದಾನೆ. ಮೊದಲೇ ಪ್ಲ್ಯಾನ್ ಮಾಡಿಕೊಂಡಿರುವಂತೆ ಹೊರಗಡೆಯಿಂದ ಅವನ ಸ್ನೇಹಿತ ಬೈಕ್‌ನಲ್ಲಿ ಬಂದು ಕರೆದಿದ್ದಾನೆ. ಹಾಕಿಕೊಂಡಿದ್ದ ಉಂಗುರದ ಜತೆ ಹನುಮಂತ ರೋಖಡೆ ಬೈಕ್ ಏರಿ ಪರಾರಿಯಾಗಿದ್ದಾನೆ.
ಚಿನ್ನದ ಅಂಗಡಿ ಮಾಲೀಕ ಪೊಲೀಸರಿಗೆ ಈ ಬಗ್ಗೆ ದೂರು ದಾಖಲಿಸಿದ್ದಾರೆ. ಈತ ಎಸಗಿರುವ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಅದನ್ನು ಆಧರಿಸಿ ತನಿಖೆ ಕೈಗೊಂಡಾಗ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 2.50 ಲಕ್ಷ ರೂ. ಮೌಲ್ಯದ ಚಿನ್ನದ ಉಂಗುರವನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿದ್ದಾರೆ.