ಶ್ರೀಮಂತ ಹಾಗೂ ಬಡ ಯುವಕರಲ್ಲಿ ಯಾರೊಂದಿಗೆ ಡೇಟಿಂಗ್ ನಡೆಸುತ್ತಿರಾ ಎಂಬ ಪ್ರಶ್ನೆಗೆ ಭುವನ ಸುಂದರಿ ಹರ್ನಾಜ್ ಸಂಧು ಕೊಟ್ಟ ಉತ್ತರವೇನು ಗೊತ್ತೇ?
Sunday, December 26, 2021
ನವದೆಹಲಿ: 21ವರ್ಷಗಳ ಬಳಿಕ ‘ಮಿಸ್ ಯೂನಿವರ್ಸ್ 2021'ರ ಕಿರೀಟವನ್ನು ಮುಡಿಗೇರಿಸಿರುವ ಭಾರತದ ಭಾರತದ ಹರ್ನಾಜ್ ಸಂಧು ಈಗ ಎಲ್ಲೆಡೆಯೂ ಭಾರೀ ಸುದ್ದಿಯಲ್ಲಿದ್ದಾರೆ. 2000 ಇಸವಿಯಲ್ಲಿ ಲಾರಾದತ್ತ ಭುವನ ಸುಂದರಿಯಾದ ಬಳಿಕ ಭಾರತದ ಪಾಲಿಗೆ ಈ ಕಿರೀಟ ಮರೀಚಿಕೆಯಾಗಿತ್ತು.
ಲಾರಾದತ್ತರಿಗಿಂತ ಮೊದಲು 1994ರಲ್ಲಿ ಸುಷ್ಮಿತಾ ಸೇನ್ ಭುವನ ಸುಂದರಿಯ ಪಟ್ಟವನ್ನು ಏರಿದ್ದರು. ಇದೀಗ ಹರ್ನಾಜ್ ಸಿಂಧು ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಮತ್ತೆ ಎತ್ತಿ ಹಿಡಿದಿದ್ದಾರೆ.
ಈ ಖುಷಿ, ಸಂಭ್ರಮದ ನಡುವೆ ಹರ್ನಾಜ್ ಸಂಧು ಇಂಡಿಯಾ ಟುಡೆಗೆ ಸಂದರ್ಶನ ನೀಡಿದ್ದು, ಬಾಲಿವುಡ್ ಪ್ರವೇಶ ಸೇರಿದಂತೆ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಹಿಂದಿನ ಭುವನ ಸುಂದರಿಗಳಾದ ಲಾರಾ ದತ್ತ ಹಾಗೂ ಸುಷ್ಮಿತಾ ಸೇನ್ ಅವರುಗಳಜಯ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಮುಂದಿನ ದಿನಗಳಲ್ಲಿ ನಿಮ್ಮನ್ನು ಬೆಳ್ಳಿಪರದೆ ಮೇಲೆ ಕಾಣಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಹರ್ನಾಜ್, 'ಇಷ್ಟು ಬೇಗ ಈ ಬಗ್ಗೆ ಹೇಳಲು ಸಾಧ್ಯವಿಲ್ಲ. ಈಗಷ್ಟೇ ನನ್ನ ಜರ್ನಿ ಆರಂಭವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದರ ಬಗ್ಗೆ ಖಂಡಿತಾ ತಿಳಿಸುತ್ತೇನೆ" ಎಂದು ಹೇಳಿದ್ದಾರೆ. ಅಭಿನಯಿಸುವುದಾದರೆ ಯಾವ ಬಾಲಿವುಡ್ ತಾರೆಯೊಂದಿಗೆ ತೆರೆಹಂಚಿಕೊಳ್ಳಲು ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಹರ್ನಾಜ್, ''ಪ್ರಿಯಾಂಕಾ ಚೋಪ್ರಾ, ಲಾರಾ ದತ್ತ ಹಾಗೂ ಸುಷ್ಮಿತಾ ಸೇನ್ರೊಂದಿಗೆ ಕಾಣಿಸಿಕೊಳ್ಳಲು ಇಚ್ಛಿಸುತ್ತೇನೆ. ಈ ಮೂವರ ಅಭಿನಯದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಸಿನಿಮಾವೊಂದು ನಿರ್ಮಾಣವಾದಲ್ಲಿ ಅದು ಎಷ್ಟು ಪ್ರಬಲವಾಗಿರುತ್ತದೆ ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ. ಅವರೆಲ್ಲರನ್ನೂ ಒಟ್ಟಿಗೆ ಸಿನಿಮಾ ನಿರ್ಮಿಸಿ ಇತಿಹಾಸ ಸೃಷ್ಟಿಸುವುದನ್ನು ಕಲ್ಪಿಸಿಕೊಳ್ಳಿ" ಎಂದರು.
ತಾವು ಶ್ರೀಮಂತ ಯುವಕ ಅಥವಾ ಜೀವನದಲ್ಲಿ ಬಡತನದ ವಿರುದ್ಧ ಹೋರಾಡುತ್ತಿರುವ ಯುವಕ ಇಬ್ಬರಲ್ಲಿ ಯಾರೊಂದಿ ಡೇಟಿಂಗ್ ಮಾಡಲು ಬಯಸುತ್ತೀರೆಂಬ ಪ್ರಶ್ನೆಗೆ ಹರ್ನಾಜ್ ಸಂಧು ಸೊಗಸಾದ ಉತ್ತರ ನೀಡಿದ್ದಾರೆ. "ಜೀವನದ ಹೋರಾಟದಲ್ಲಿರುವ ಯುವಕನೊಂದಿಗೆ ಡೇಟಿಂಗ್ ಮಾಡಲು ನಾನು ಸದಾ ಬಯಸುತ್ತೇನೆ. ನಾನು ಜೀವನದ ಹಾದಿಯಲ್ಲಿ ಸಾಕಷ್ಟು ಹೋರಾಟ ನಡೆಸಿಯೇ ಈ ಸ್ಥಾನಕ್ಕೆ ಬಂದಿದ್ದೇನೆ. ಈಗಲೂ ಹೋರಾಡುತ್ತಲೇ ಇದ್ದೇನೆ. ಓರ್ವ ವ್ಯಕ್ತಿಯಾಗಿ ಜೀವನದಲ್ಲಿ ಹೋರಾಟ ನಡೆಸುವುದು ಬಹಳ ಮುಖ್ಯವೆಂದು ಹೇಳುತ್ತೇನೆ. ಹೋರಾಟದ ಜೀವನದಿಂದ ಮಾತ್ರ ಸಾಧನೆಗೊಂದು ಮೌಲ್ಯ ಬರುತ್ತದೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ" ಎಂದು ಹರ್ನಾಜ್ ಹೇಳಿದ್ದಾರೆ.
"ನಿಜ ಹೇಳಬೇಕೆಂದರೆ, ಓರ್ವ ಬಾಲಿವುಡ್‌ಗೆ ಪ್ರವೇಶಿಸಿದ ಬಳಿಕ ಆತ/ಆಕೆ ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದು ನನಗೆ ತಿಳಿದಿಲ್ಲ. ಆದರೆ, ನಾನು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ನನ್ನ ಮೇಲಿರುತ್ತದೆ. ಹೀಗಾಗಿ ಇಷ್ಟು ಬೇಗ ಈ ಎಲ್ಲದರ ಬಗ್ಗೆ ಮಾತನಾಡುವುದು ಸರಿಯಲ್ಲ. ಇದೀಗ ನನ್ನ ಗೆಲುವನ್ನು ಸಂಭ್ರಮಿಸುವ ಕಡೆ ಗಮನ ಹರಿಸಿದ್ದೇನೆ. ನಾಳೆ ಏನು ನಡೆಯುತ್ತದೆ, ನಾನು ಯಾವ ಯೋಜನೆಗೆ ಸಹಿ ಹಾಕುತ್ತೇನೆ" ಎಲ್ಲವನ್ನು ತಿಳಿಸುತ್ತೇನೆಂದು ಹರ್ನಾಜ್ ಸಂಧು ಮಾತು ಮುಗಿಸಿದರು.