
ಬಹುಕೋಟಿ ಸುಲಿಗೆ ಪ್ರಕರಣದ ಸುಕೇಶ್ ಚಂದ್ರಶೇಖರ್ ನೊಂದಿಗೆ ನಟಿ ಜಾಕ್ವಿಲಿನ್ ಫೋಟೋ: ದೇಶ ಬಿಟ್ಟು ಹೋಗದಂತೆ ಇಡಿ ನಿರ್ಬಂಧ
Monday, December 6, 2021
ಮುಂಬೈ: ಬಾಲಿವುಡ್ ನಟಿ, ಶ್ರೀಲಂಕಾದ ಮಿಸ್ ಯುನಿವರ್ಸ್ ಜಾಕ್ವೆಲಿನ್ ಫೆರ್ನಾಂಡಿಸ್ ಹೆಸರು ಸುಕೇಶ್ ಚಂದ್ರಶೇಖರ್ ನಡೆಸಿರುವ
ಬಹುಕೋಟಿ ವಂಚನೆ ಪ್ರಕರಣದಲ್ಲಿ ಕೇಳಿ ಬರುತ್ತಿರುವುದು ಆಕೆಗೆ ಸಂಕಷ್ಟವಾಗಿ ಪರಿಣಮಿಸಿದೆ. ಈ ಮೂಲಕ ಆಕೆ ಕಳೆದ ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
ಜಾಕ್ವೆಲಿನ್ ಫೆರ್ನಾಂಡೀಸ್ ಗೆ 200 ಕೋಟಿ ರೂ. ವಂಚಕ ಸುಕೇಶ್ ಚಂದ್ರಶೇಖರ್ ಹಿಂದಿನಿಂದ ಬಂದು ಮುತ್ತಿಕ್ಕುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸದ್ಯ ಈ ಫೋಟೋಗಳು ನೆಟ್ಟಿಗರ ಹಾಟ್ ಟಾಪಿಕ್ ಎನ್ನಬಹುದು. ಜೊತೆಗೆ, ಈಗ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಇಂಡಿಯಾ ಬಿಟ್ಟು ಹೊರ ಹೋಗಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ಅಂದಹಾಗೆ, ಜಾಕ್ವೆಲಿನ್ ವಂಚಕ ಸುಕೇಶ್ ಚಂದ್ರಶೇಖರ್ ನೊಂದಿಗೆ ಡೇಟಿಂಗ್ ನಲ್ಲಿದ್ದರು ಎಂದು ಹೇಳಲಾಗುತ್ತಿದೆ. ಇದಕ್ಕೆ ಸಿಕ್ಕಿರುವ ಮಹತ್ತರವಾದ ಸುಳಿವೇ ಈ ವೈರಲ್ ಫೋಟೋಗಳು. ಸುಕೇಶ್ ಚಂದ್ರಶೇಖರ್ ಹಲವಾರು ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಹಾಗೂ ಉದ್ಯಮಿಗಳಿಗೆ ಬೆದರಿಕೆ ಹಾಕಿ ಕೋಟಿ ಕೋಟಿ ರೂ. ಹಣವನ್ನು ಸುಲಿಗೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. 200 ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ವಂಚಕ ಸುಕೇಶ್ ಜೂನ್ ತಿಂಗಳಲ್ಲಿ ಜೈಲು ಸೇರಿದ್ದ ಸಂದರ್ಭದಲ್ಲಿಯೂ ಸುಕೇಶ್ ಜೊತೆ ನಟಿ ಜಾಕ್ವಿಲಿನ್ ಡೇಟಿಂಗ್ ಮಾಡ್ತಿರೋದಾಗಿ ಸುದ್ದಿ ಹಬ್ಬಿತ್ತು. ಆದರೆ ಈ ಸುದ್ದಿಗಳನ್ನು ಅಂದು ಜಾಕ್ವೆಲಿನ್ ನಿರಾಕರಿಸಿದರು.
ಇದೀಗ ಸದ್ಯ ವೈರಲ್ ಆಗುತ್ತಿರುವ ಪೋಟೋಗಳು ಮತ್ತೆ ನಟಿಯನ್ನು ಸಂಕಷ್ಟಕ್ಕೆ ದೂಡಿದೆ. ಸದ್ಯ 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸುಕೇಶ್ ಚಂದ್ರಶೇಖರ್, ಆತನ ಪತ್ನಿ ಲೀನಾ ಮತ್ತು ಇತರ ಆರು ಮಂದಿಯ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದೆ. ವೈರಲ್ ಆಗಿರುವ ಫೋಟೋಗಳಿಂದ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಹೆಸರು ಮತ್ತೆ ಈ ಪ್ರಕರಣದಲ್ಲಿ ಕೇಳಲಾರಂಭಿಸಿದೆ. ಆಕೆಗೆ ಸುಕೇಶ್ನಿಂದ ಅರೇಬಿಯನ್ ಕುದುರೆಯು ಸೇರಿದಂತೆ 10 ಕೋಟಿ ರೂ.ಗೂ ಹೆಚ್ಚಿನ ಬೆಲೆ ಬಾಳುವ ಉಡುಗೊರೆಗಳು ಲಭಿಸಿವೆ ಎಂಬ ಮಾಹಿತಿ ಸಹ ಹೊರ ಬಿದ್ದಿದೆ.
ಈ ಹಿಂದೆಯೇ 7 ಗಂಟೆಗೂ ಅಧಿಕ ಕಾಲ ಜಾಕ್ವೆಲಿನ್ ಫೆರ್ನಾಂಡಿಸ್ ರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿತ್ತು. ಇದೀಗ, ನಟಿಗೆ ವಂಚಕ ಸುಕೇಶ್ನಿಂದ ಲಭಿಸಿರುವ ಉಡುಗೊರೆಗಳ ಮಾಹಿತಿಯಿಂದ ಹಾಗೂ ವೈರಲ್ ಆಗುತ್ತಿರುವ ಫೋಟೋಗಳನ್ನು ಆಧರಿಸಿ, ಜಾರಿ ನಿರ್ದೇಶನಾಲಯವು ಪ್ರಕರಣದ ಪೂರ್ತಿ ವಿಚಾರಣೆ ನಡೆಯುವವರೆಗೆ ನಟಿ ದೇಶ ಬಿಟ್ಟು ಹೋಗುವ ಹಾಗಿಲ್ಲ ಎಂದು ಸುತ್ತೋಲೆ ಹೊರಡಿಸಿದೆ.
ಸದ್ಯ ಜಾಕ್ವೆಲಿನ್ ದಿಯುನಲ್ಲಿ ನಡೆಯುತ್ತಿದ್ದ ‘ರಾಮ್ ಸೇತು’ ಚಿತ್ರದ ಶೂಟಿಂಗ್‌ನಿಂದ ಹಿಂದಿರುಗಿದ್ದಾರೆ. ಡಿಸೆಂಬರ್ 10ರಂದು ರಿಯಾದ್‌ನಲ್ಲಿ ನಡೆಯಲಿರುವ ನಟ ಸಲ್ಮಾನ್ ಖಾನ್ ಅವರ ದಬಾಂಗ್ ಸಿನಿಮಾ ಪ್ರವಾಸದಲ್ಲಿ ಭಾಗವಹಿಸಬೇಕಿದೆ. ಆದರೆ, ಅದಕ್ಕೂ ಮುನ್ನವೇ ಮುಂಬೈ ನಿಲ್ದಾಣದಲ್ಲಿ ಕಾಣಿಸಿಕೊಂಡ ಜಾಕ್ವೆಲಿನ್ ರನ್ನು ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್ ಅಧಿಕಾರಿಗಳು ತಡೆದು ಮನೆಗೆ ವಾಪಸ್ ಕಳುಹಿಸಿದ್ದಾರೆ. ಜಾರಿ ನಿರ್ದೇಶನಾಲಯದ ಸುತ್ತೋಲೆಯಂತೆ ವಿಮಾನ ನಿಲ್ದಾಣದ ಭದ್ರತಾ ಪಡೆಗಳು ಈ ಕೆಲಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.