ಹೊಸ ವರ್ಷಕ್ಕೆ ಸದ್ದು ಮಾಡುತ್ತಿದೆ ಚಂದನ್ ಶೆಟ್ಟಿ 'ಲಕ ಲಕ ಲ್ಯಾಂಬೊರ್ಗಿನಿ': ಹಾಡಿಗೆ ಸಖತ್ ಸ್ಟೆಪ್ ಹಾಕಿದ ರಚಿತಾ ರಾಮ್
Friday, December 31, 2021
ಬೆಂಗಳೂರು: ಹೊಸ ವರ್ಷ ಬಂತೆಂದರೆ ರ್ಯಾಪರ್ ಚಂದನ್ ಶೆಟ್ಟಿಯಿಂದ ಹೊಸದೊಂದು ಹಾಡನ್ನು ಎಲ್ಲರೂ ನಿರೀಕ್ಷೆ ಮಾಡುತ್ತಾರೆ. ಎಂದಿನಂತೆ ಈ ಬಾರಿಯೂ ಚಂದನ್ ಶೆಟ್ಟಿಯವರೂ 'ಲಕ ಲಕ ಲ್ಯಾಂಬೋರ್ಗಿನಿ' ಹಾಡನ್ನು ನೀಡಿದ್ದಾರೆ. ಇದು ಅವರ ಅಭಿಮಾನಿಗಳಿಗೆ ತುಂಬಾನೆ ಸಂತೋಷವನ್ನು ಕೊಟ್ಟಿದೆ ಎಂದೇ ಹೇಳಬೇಕು.
ಅಂದಹಾಗೆ, ಚಂದನ್ ಶೆಟ್ಟಿ ಸಂಗೀತ ನಿರ್ದೇಶಿಸಿ ಹಾಡಿರುವ ಈ ಹಾಡಿನ ಹೈಲೈಟ್ ಅಂದರೆ ನಟಿ ರಚಿತಾ ರಾಮ್ ಅವರು ಚಂದನ್ ಶೆಟ್ಟಿಯೊಂದಿಗೆ ಸಖತ್ ಸ್ಟೆಪ್ ಹಾಕಿದ್ದಾರೆ.
ಈಗಾಗಲೇ ಡಿಂಪಲ್ ಕ್ಲೀನ್ ರಚಿತಾ 'ಲವ್ ಯು ರಚ್ಚು' , 'ಏಕ್ ಲವ್ ಯಾ' ಸಿನಿಮಾಗಳ ಮೂಲ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. 'ಲವ್ ಯು ರಚ್ಚು' ಇಂದು ಬಿಡುಗಡೆಯಾಗುತ್ತಿದ್ದು, 'ಏಕ್ ಲವ್ ಯಾ' ಚಿತ್ರ ಜನವರಿ 21 ಕ್ಕೆ ತೆರೆಕಾಣಲಿದೆ.
ಇದೀಗ, ರಚಿತಾ ರಾಮ್ ಹೊಸ ವರ್ಷದ ಹಾಡಿನಲ್ಲಿ ಹಾಟ್ ಉಡುಪುಗಳನ್ನು ಧರಿಸಿ ಚಂದನ್ ಶೆಟ್ಟಿಯೊಂದಿಗೆ ಹೆಜ್ಜೆ ಹಾಕಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಅದರಲ್ಲೂ ರಚ್ಚು ಅಭಿಮಾನಿಗಳಿಗಂತೂ ಈ ಹಾಡು ಕಿಕ್ ಮೇಲೆ ಕಿಕ್ ನೀಡುತ್ತಿದೆ. ಟಕೀಲ, ಬ್ಯಾಡ್‌ಬಾಯ್, ತ್ರಿಪೇಗ್ ಈ ಹಾಡುಗಳು, ಹೊಸ ವರ್ಷಕ್ಕೆ ಹುಚ್ಚೆದ್ದು ಕುಣಿಯಬೇಕು ಎಂಬ ಯುವಕ - ಯುವತಿಯರ ಮನಸ್ಸು ಗೆದ್ದಿದೆ. ಇದೀಗ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ 18 ಗಂಟೆಗಳಲ್ಲಿ 2 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಟ್ರೆಂಡಿಂಗ್‌ನಲ್ಲಿದೆ. ಸದ್ಯ ಮ್ಯೂಸಿಕ್ ವಿಭಾಗದಲ್ಲಿ ಈ 'ಲಕ ಲಕ ಲ್ಯಾಂಬೋರ್ಗಿನಿ' ಹಾಡು ನಂಬರ್ 1 ಸ್ಥಾನದಲ್ಲಿದೆ.
ಕಳೆದ 4 ವರ್ಷಗಳಿಂದ ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಅಂತ ನಾಲ್ಕು ಹಾಡುಗಳು ಬಿಡುಗಡೆ ಮಾಡಿದ್ದು , ಆ ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿವೆ. ಇನ್ನು , 'ಲಕ ಲಕ ಲ್ಯಾಂಬೋರ್ಗಿನಿ' ಹಾಡಿನ ಭಾಗ -2 ಸಹ ಬರಲಿದೆಯಂತೆ. ಆ ಹಾಡಿನಲ್ಲಿ ನಿಜವಾದ ಲ್ಯಾಂಬೋರ್ಗಿನಿ ಕಾರು ಬಳಸಿ ವಿದೇಶದಲ್ಲಿ ಶೂಟ್ ಮಾಡಲಾಗುತ್ತೆ ಎಂದು ಹೇಳಲಾಗುತ್ತಿದೆ.