ಪ್ರೇಮ ವಿವಾಹವಾದ ಪುತ್ರಿಯ ಮಾಂಗಲ್ಯ ಸರವನ್ನೇ ಕಿತ್ತುಹಾಕಿ, ಜುಟ್ಟು ಎಳೆದಾಡಿದ ತಂದೆ!
Tuesday, December 21, 2021
ಮೈಸೂರು: ತಮ್ಮ ಮಾತನ್ನು ಧಿಕ್ಕರಿಸಿ ಪ್ರೇಮ ವಿವಾಹವಾದ ಪುತ್ರಿಯನ್ನು ಹೇಗಾದರೂ ಮರಳಿ ಮನೆಗೆ ಕರೆದೊಯ್ಯಬೇಕೆಂದುಕೊಂಡ ತಂದೆಯೋರ್ವನು ಮಗಳ ಮಾಂಗಲ್ಯ ಸರವನ್ನೇ ಕಿತ್ತು, ಜುಟ್ಟು ಹಿಡಿದು ಎಳೆದಾಡಿದ ಘಟನೆ ನಂಜನಗೂಡು ಉಪನೋಂದಣಾಧಿಕಾರಿ ಕಚೇರಿ ಆವರಣದಲ್ಲಿ ನಡೆದಿದೆ.
ಹರತಲೆ ಗ್ರಾಮದ ಚೈತ್ರಾ, ಹಲ್ಲರೆ ಗ್ರಾಮದ ಮಹೇಂದ್ರ ಎಂಬಾತನನ್ನು ಸುಮಾರು ಒಂದೂವರೆ ವರ್ಷದಿಂದ ಪ್ರೀತಿಸಿಸುತ್ತಿದ್ದಳು. ಅವರಿಬ್ಬರೂ ಮದುವೆಯಾಗುವ ಯೋಚನೆಯನ್ನು ಮಾಡಿದ್ದರು. ಆದರೆ, ಇದಕ್ಕೆ ಪಾಲಕರ ವಿರೋಧವಿತ್ತು. ಆದರೂ ಅದನ್ನು ಲೆಕ್ಕಿಸದೆ ಡಿ.8ರಂದು ಪ್ರೀತಿಸಿದ ಯುವಕನನ್ನು ಚೈತ್ರಾ ವಿವಾಹವಾಗಿದ್ದಳು. ಮದುವೆಯ ಬಳಿಕ ಇದೀಗ ನೋಂದಣಿಗಾಗಿ ನಂಜನಗೂಡಿನ ಸಬ್ ರಿಜಿಸ್ಟರ್ ಕಚೇರಿಗೆ ನವದಂಪತಿಗಳು ಬಂದಿದ್ದರು.
ಇದೇ ಸಮಯದಲ್ಲಿ ಅಲ್ಲಿಗೆ ಚೈತ್ರಾ ತಂದೆಯೂ ಕೂಡಾ ಬಂದಿದ್ದರು. ಪುತ್ರಿಯನ್ನು ಹೇಗಾದರೂ ಮಾಡಿ ಮರಳಿ ಮನೆಗೆ ಕರೆದುಕೊಂಡು ಹೋಗಬೇಕೆನ್ನುವುದು ಅವರ ಉದ್ದೇಶವಾಗಿತ್ತು. ಮಗಳನ್ನು ಕಂಡ ತಕ್ಷಣ ಆಕೆಯ ಮಾಂಗಲ್ಯ ಸರವನ್ನು ಕಿತ್ತುಹಾಕಿ, ಜುಟ್ಟು ಹಿಡಿದು ಎಳೆದಾಡಿ ಮನೆಗೆ ಕರೆಯೊಯ್ಯಲು ಯತ್ನಿಸಿದ್ದಾರೆ. ಆದರೆ, ತಂದೆಯ ಬಲವಂತಕ್ಕೆ ಮಗಳು ಒಪ್ಪಲಿಲ್ಲ.
ಹೇಗಾದರೂ ಆಕೆಯನ್ನು ಕರೆದೊಯ್ಯಲೇಬೇಕೆಂಬ ಹಠಕ್ಕೆ ಬಿದ್ದಿದ್ದ ತಂದೆಯು, ಪುತ್ರಿಯನ್ನು ಬಲವಂತವಾಗಿ ಹಿಡಿದು ಎಳೆದಾಡಿದಾಗ ಸಾರ್ವಜನಿಕರು ಮಧ್ಯ ಪ್ರವೇಶಿಸಿದ್ದಾರೆ. ಬಳಿಕ ಅವರ ನೆರವಿನಿಂದ ತಂದೆಯಿಂದ ತಪ್ಪಿಸಿಕೊಂಡ ಚೈತ್ರಾ, ತನ್ನ ಪತಿಯನ್ನು ಸೇರಿಕೊಂಡಿದ್ದಾಳೆ. ಇದೀಗ ತನಗೆ ತನ್ನ ತಂದೆಯಿಂದ ರಕ್ಷಣೆ ಬೇಕೆಂದು ಸಾರ್ವಜನಿಕವಾಗಿಯೇ ಚೈತ್ರಾ ಅವಲತ್ತುಕೊಂಡಿದ್ದಾರೆ. ಇದರಿಂದ ತೀವ್ರ ಮುಖಭಂಗಗೊಂಡ ತಂದೆ ಬಸವರಾಜ ನಾಯ್ಕ ಮನೆಗೆ ಹಿಂದಿರುಗಿದ್ದಾರೆ.
ತಂದೆಯಿಂದ ರಕ್ಷಣೆ ಕೋರಿ ಪುತ್ರಿ ಚೈತ್ರಾ ನಂಜನಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.