Mangaluru: 'ಕಾರ್ಣಿಕೊದ ಕಲ್ಲುರ್ಟಿ' ತುಳು ಸಿನಿಮಾ ಡಿ.3ಕ್ಕೆ ತೆರೆಗೆ
Thursday, December 2, 2021
ಮಂಗಳೂರು: ಈಗಾಗಲೇ ಕೋಸ್ಟಲ್ ವುಡ್ ನಲ್ಲಿ ತುಳು ಪಾಡ್ದನ ಆಧಾರಿತ ಕೆಲ ಸಿನಿಮಾಗಳು ತೆರೆಕಂಡು, ಪ್ರೇಕ್ಷಕರ ಮನಗೆದ್ದಿವೆ. ಇದೀಗ ಆ ಸಾಲಿಗೆ ಕಲ್ಲುರ್ಟಿ - ಕಲ್ಕುಡ ದೈವದ ಪಾಡ್ದನ ಆಧಾರಿತ 'ಕಾರ್ಣಿಕೊದ ಕಲ್ಲುರ್ಟಿ' ತುಳು ಸಿನಿಮಾ ಸೇರಲಿದೆ. ಈ ಸಿನಿಮಾ ನಾಳೆ (ಡಿಸೆಂಬರ್ 3ರಂದು) ತೆರೆ ಕಾಣಲಿದೆ.
ಸುಮಾರು 400 ವರ್ಷಗಳ ಹಿಂದಿನ ತುಳುನಾಡಿನಲ್ಲಿ ನಡೆದ ಘಟನೆಯನ್ನು ಆಧರಿಸಿದ ಈ ಸಿನಿಮಾವು ಕಲ್ಲುರ್ಟಿ - ಕಲ್ಕುಡ ಪಾಡ್ದನದ ಕಥೆಯಾಧಾರಿತವಾಗಿದೆ. ಪುರುಷ ಸಮಾಜದ ದೌರ್ಜನ್ಯ, ದಬ್ಬಾಳಿಕೆಯನ್ನು ಮೆಟ್ಟಿ ನಿಲ್ಲುವ ಗಟ್ಟಿದನಿಯ ಹೆಣ್ಣು ಕಾಳಮ್ಮ ಮುಂದೆ ಕಾಯ ಬಿಟ್ಟು ಮಾಯ ಸೇರಿ ಕಲ್ಲುರ್ಟಿ ದೈವವಾಗಿ ತಮಗೆ ಮೋಸಗೈದ ಅರಸನಿಗೆ ಸರಿಯಾದ ಪಾಠ ಕಲಿಸುತ್ತಾಳೆ. ಮುಂದೆ ಆಕೆ ತುಳುನಾಡಿನ ಕುಲದೇವತೆಯಾಗಿ ಮನೆ ಮನೆಯಲ್ಲೂ ಆರಾಧನಾ ಶಕ್ತಿಯಾಗುತ್ತಾಳೆ. ಇದೀಗ ಮಹೇಂದ್ರ ಕುಮಾರ್ ಇದೇ ಕಥಾವಸ್ತುವನ್ನು ಆಧರಿಸಿ ಕಾರ್ಣಿಕದ ಕಲ್ಲುರ್ಟಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಇದು ಅವರ ಚೊಚ್ಚಲ ಸಿನಿಮಾವೂ ಹೌದು.
ಕಲ್ಲುರ್ಟಿ-ಕಲ್ಕುಡ ದೈವಗಳ ಮೂಲ ಕಥೆ ನಡೆದಿರುವ ಕಾರ್ಕಳದಲ್ಲಿಯೇ ಈ ಸಿನಿಮಾದ ಚಿತ್ರೀಕರಣವನ್ನು ಮಾಡಲಾಗಿದೆ. ಸಿನಿಮಾದಲ್ಲಿ ಚೆನ್ನಾಗಿ ಗ್ರಾಫಿಕ್ಸ್ಗಳನ್ನು ಬಳಸಿಕೊಳ್ಳಲಾಗಿದೆ. 400 ವರ್ಷಗಳ ಹಿಂದಿನ ಕಥೆಯಾದ್ದರಿಂದ ಸನ್ನಿವೇಶ, ಚಿತ್ರೀಕರಣದ ಸ್ಥಳ, ಕಾಸ್ಟ್ಯೂಮ್, ಭಾಷೆಗೆ ಹೆಚ್ಚಿನ ಗಮನಹರಿಸಿ ಚಿತ್ರೀಕರಣ ಮಾಡಲಾಗಿದೆ ಎಂದು ಸಿನಿಮಾ ನಿರ್ದೇಶಕ - ನಿರ್ಮಾಪಕ ಮಹೇಂದ್ರ ಕುಮಾರ್ ಹೇಳಿದ್ದಾರೆ.
ಸಿನಿಮಾಕ್ಕೆ ಬೆಂಗಳೂರಿನ ಹಿತನ್ ಹಾಸನ್ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳನ್ನು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಹಾಡಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 1.75 ಕೋಟಿ ರೂ. ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದ್ದು, 2019ರಲ್ಲಿ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟ್ ದೊರಕಿದರೂ ಕೊರೊನಾ ಕಾರಣದಿಂದ ಸಿನಿಮಾವನ್ನು ತೆರೆಗೆ ತರಲು ಸಾಧ್ಯವಾಗಲಿಲ್ಲ. ಇದೀಗ ಸಿನಿಮಾ ಬಿಡುಗಡೆಯಾಗಲಿದ್ದು, ತುಳುವರೆಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಬೇಕೆಂದು ಮಹೇಂದ್ರ ಕುಮಾರ್ ಮನವಿ ಮಾಡಿಕೊಂಡರು.