
ವಿಶ್ವದ ಅತ್ಯಂತ ದುಬಾರಿ ಟೀ ಪೌಡರ್ ಮನೋಹರಿ ಗೋಲ್ಡ್ ಟೀ ಮಾರಾಟವಾಗಿರೋದು ಎಷ್ಟಕ್ಕೆ ಗೊತ್ತೇ?
Tuesday, December 14, 2021
ಗುಹಾವಟಿ: ಅಸ್ಸಾಂ ಎಂದರೆ ಪಕ್ಕಾ ನೆನಪಾಗುವುದು ಚಹಾದ್ದೇ. ಚಹಾಗಳ ನಾಡು ಅಸ್ಸಾಂ ಬಗೆಬಗೆಯ ರೂಪದ ಚಹಾಗಳಿಗೆ ಪ್ರಸಿದ್ಧಿ. ಇವುಗಳಲ್ಲಿ ಬಲು ರುಚಿಕರ ಎನಿಸಿರುವ, ಸಾಮಾನ್ಯ ಜನರಿಗೆ ಕೈಗೆಟುಕುದ ಚಹವೆಂದರೆ ಅದೇ ಮನೋಹರಿ ಗೋಲ್ಡ್ ಟೀ.
ಇಲ್ಲಿಯವರೆಗೆ ಕೆ.ಜಿ.ಗೆ 75 ಸಾವಿರ ರೂ.ನಂತೆ ಮಾರಾಟವಾಗುತ್ತಿದ್ದ ಈ ಟೀಪುಡಿ ಇಂದು 99,999 ರೂ.ಗೆ ಮಾರಾಟವಾಗಿದೆಯಂತೆ ಎಂದರೆ ಇದು ಎಷ್ಟೊಂದು ದುಬಾರಿ ಚಹಾ ಹುಡಿ ಎಂದು ನೀವೇ ಊಹಿಸಿಕೊಳ್ಳಿ.
ಈ ಮೂಲಕ ಅತ್ಯಂತ ಸ್ವಾದಿಷ್ಟ ಭರಿತ ಚಹಾಪುಡಿಯೆಂದೇ ಪ್ರಸಿದ್ಧಿ ಪಡೆದಿರುವ ಮನೋಹರಿ ತನ್ನ ದಾಖಲೆಯನ್ನು ತಾನೇ ಮುರಿದಿದೆ. ಚಹಾಪುಡಿಯನ್ನು 75 ಸಾವಿರ ರೂ. ಕೊಟ್ಟು ಈ ಮೊದಲು ಗುಹಾವಟಿ ಮೂಲದ ವಿಷ್ಣು ಟೀ ಕಂಪನಿ ಖರೀದಿಸಿತ್ತು. ಇದೀಗ ಸೌರವ್ ಟೀ ಟ್ರೇಡರ್ಸ್ ಎಂಬ ಕಂಪನಿ 99,999ರೂ ಗೆ ಬಿಡ್ ಮಾಡಿ ಇದನ್ನು ಖರೀದಿಸಿದೆ. ಈ ಮೂಲಕ ವಿಶ್ವದ ಅತ್ಯಂತ ದುಬಾರಿ ಟೀ ಪೌಡರ್ ಎಂದು ಪ್ರಸಿದ್ಧಿ ಗಳಿಸಿದೆ.
ಆನ್‌ಲೈನ್ ಮೂಲಕ ವಿದೇಶಗಳಿಗೂ ಮನೋಹರಿ ಗೋಲ್ಡ್ ಚಹಾಪುಡಿಯು ಮಾರಾಟವಾಗುತ್ತಿದೆ. ವಿದೇಶಿಗರು ಮುಗಿಬಿದ್ದು ಇದನ್ನು ಖರೀದಿ ಮಾಡುತ್ತಿದ್ದಾರೆ. ವಿದೇಶದಲ್ಲಿ ಇದಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಮನೋಹರಿ ಗೋಲ್ಡ್ ಚಹಾಪುಡಿಯನ್ನು ಎಳೆಯ ಎಲೆಗಳಿಂದ ಉತ್ಕೃಷ್ಟ ರೀತಿಯಲ್ಲಿ ತಯಾರಿಸಲಾಗುತ್ತದೆ. ಈ ಮಾದರಿಯ ಟೀ ಎಲೆಗಳು ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ಕೀಳಬೇಕಾಗುತ್ತದೆ. ಆಗ ಕೀಳುವ ಎಳೆಯ ಎಲೆಯಿಂದ ಟೀಯನ್ನು ತಯಾರು ಮಾಡಲಾಗುತ್ತದೆ.