ಮಾಜಿ ಪ್ರಿಯಕರನ ಎಡವಟ್ಟು: ನಿಶ್ಚಿತಾರ್ಥವಾಗಿದ್ದ ಯುವತಿಯ ಮದುವೆ ರದ್ದು!
Monday, December 20, 2021
ಬೆಂಗಳೂರು: ನಿಶ್ಚಿತಾರ್ಥವಾಗಿದ್ದ ಯುವತಿ ತನ್ನ ಮದುವೆಯ ಕನಸಿನ ಸಂಭ್ರಮದಲ್ಲಿದ್ದಳು. ಮದುವೆಯ ತಯಾರಿಯೂ ಭರ್ಜರಿಯಾಗಿಯೇ ನಡೆಯುತ್ತಿತ್ತು. ಆದರೆ, ಮಾಜಿ ಪ್ರಿಯಕರ ಮಾಡಿದ ಎಡವಟ್ಟಿನಿಂದ ಇದೀಗ ಆಕೆಯ ಮದುವೆಯೇ ಮುರಿದುಬಿದ್ದಿದಿ. ಇದೀಗ ನೊಂದ ಯುವತಿ ಮಾಜಿ ಪ್ರಿಯಕರನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಸುಬ್ರಹ್ಮಣ್ಯಪುರ ನಿವಾಸಿ 23 ವರ್ಷದ ಯುವತಿ ಕೊಟ್ಟಿರುವ ದೂರಿನನ್ವಯ ದಿಲೀಪ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವತಿ ಹಾಗೂ ದಿಲೀಪ್ ಕಾಲೇಜು ಸಹಪಾಠಿಗಳಾಗಿದ್ದರು. ಆ ಸಂದರ್ಭ ಇಬ್ಬರ ನಡುವೆ ಪ್ರೀತಿ ಮೊಳೆತಿತ್ತು. ಆಗ ದಿಲೀಪ್ ಯುವತಿಯ ಗಮನಕ್ಕೆ ಬಾರದಂತೆ ಮೊಬೈಲ್ನಲ್ಲಿ ಆಕೆಯ ಖಾಸಗಿ ಫೋಟೋಗಳನ್ನು ಸೆರೆಹಿಡಿದಿದ್ದ. ಆ ಬಳಿಕ ಇಬ್ಬರೂ ದೂರವಾಗಿದ್ದರು. ಇತ್ತೀಚೆಗೆ ಆ ಫೋಟೋಗಳನ್ನು ಯುವತಿಗೆ ತೋರಿಸಿ, “ತನ್ನನ್ನು ವಿವಾಹವಾಗದಿದ್ದರೆ, ಈ ಫೋಟೊಗಳನ್ನು ಜಾಲತಾಣಗಳಲ್ಲಿ ವೈರಲ್ ಮಾಡುವೆನೆಂದು” ಬೆದರಿಕೆ ಒಡ್ಡುತ್ತಿದ್ದ.
ಆದರೂ ಆಕೆ ಆತನನ್ನು ವಿವಾಹವಾಗಲು ಒಪ್ಪಿರಲಿಲ್ಲ. ಈ ನಡುವೆ ಕೆಲ ದಿನಗಳ ಹಿಂದೆ ಯುವತಿಗೆ ಬೇರೊಬ್ಬ ಯುವಕನೊಂದಿಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ನಿಶ್ಚಿತಾರ್ಥ ಮಾಡಿಕೊಂಡಿದ್ದ ವರನ ಕುಟುಂಬದವರಿಗೆ ಡಿ.8ರಂದು ಯುವತಿಯ ಖಾಸಗಿ ಫೋಟೋಗಳನ್ನು ದಿಲೀಪ್ ಕಳುಹಿಸಿದ್ದ. ಇದರಿಂದ ಯುವತಿಯೊಂದಿಗೆ ನಿಶ್ಚಯವಾಗಿದ್ದ ಯುವಕ ಮದುವೆ ರದ್ದು ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಇದೀಗ ಮಾಜಿ ಪ್ರಿಯಕರ ದಿಲೀಪ್ ವಿರುದ್ಧ ದಕ್ಷಿಣ ಸಿಇಎನ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.