
ತಾರಾಜೋಡಿ ವಿಕ್ಕಿ - ಕತ್ರಿನಾ ಮದುವೆಗೆ ಹಾಜರಾಗುವವರಿಗೆ ಷರತ್ತುಗಳ ಪಟ್ಟಿ: ಸಹಿ ಹಾಕಿದವರಿಗೆ ಮಾತ್ರ ಕೋಡ್ ಸಂಖ್ಯೆಯಿಂದ ಎಂಟ್ರಿ ?
Saturday, December 4, 2021
ಮುಂಬೈ: ಬಾಲಿವುಡ್ ಅಂಗಳದಲ್ಲಿ ತಾರಾಜೋಡಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅದ್ಧೂರಿ ಮದುವೆಯ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ. ಎಲ್ಲಿ ನೋಡಿದರೂ ಈ ಮದುವೆಯ ವಿಚಾರ ಟಾಕ್ ಆಫ್ ದಿ ಟೌನ್ ಆಗಿದೆ. ಈ ತಾರಾಜೋಡಿಯ ಮದುವೆಗೆ ಸಿನಿ ಉದ್ಯಮದ ಘಟಾನುಘಟಗಳು ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಎಲ್ಲೆಲ್ಲೂ ಕೇಳಿ ಬರುತ್ತಿದೆ.
ಆದ್ದರಿಂದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ವಿವಾಹ ನಡೆಯುವ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿರುವ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಭಾರೀ ಭದ್ರತೆ ಏರ್ಪಾಡು ಮಾಡಲಾಗುತ್ತಿದೆ. ಅಲ್ಲದೆ ಸಾಕಷ್ಟು ವಿಶೇಷತೆಗಳಿಗೆ ಈ ಮದುವೆ ಸಾಕ್ಷಿಯಾಗಲಿದೆ ಎನ್ನಲಾಗುತ್ತಿದೆ. ಅತಿಥಿಗಳಿಗಾಗಿ ವಿಶೇಷ ಕೋಡ್ ವ್ಯವಸ್ಥೆ ಇದ್ದು, ಮದುವೆಯನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲು ಅತಿಥಿಗಳಿಗೆ ರಹಸ್ಯ ಕೋಡ್ಸ್ಗಳನ್ನು ನೀಡಲಾಗಿದೆ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಹೆಸರಿನಲ್ಲಿರುವ ಆಲ್ಫಾಬೆಟ್ ಗಳನ್ನು ಆಧರಿಸಿ ರಹಸ್ಯ ಸಂಕೇತಗಳನ್ನು ಮಾಡಲಾಗಿದೆ. ಈ ಕೋಡ್ಗಳನ್ನು ಹೇಳಿದ್ದಲ್ಲಿ ಮಾತ್ರ ಮದುವೆ ಮಂಟಪಕ್ಕೆ ಪ್ರವೇಶ ದೊರಕಲಿದೆಯಂತೆ. ಇನ್ನು ಮದುವೆ ಆಗಮಿಸುವ ವಿಶೇಷ ಅತಿಥಿಗಳ ಹೆಸರುಗಳನ್ನೂ ಗೌಪ್ಯವಾಗಿ ಇರಿಸಲಾಗಿದೆ. ಎಲ್ಲ ಅತಿಥಿಗಳಿಗೆ ಹೆಸರಿನ ಬದಲಾಗಿ ಕೋಡ್ಸ್ಗಳನ್ನು ನೀಡಿಯೇ ಹೋಟೆಲ್ ಹಂಚಿಕೆ ಮಾಡಲಿದೆ.
ಈ ಕೋಡ್ಸ್ ಗಳ ಪ್ರಕಾರವೇ ಹೋಟೆಲ್ ರೂಮ್ ಸೇವೆ, ಭದ್ರತೆ ಮತ್ತು ಬೌನ್ಸರ್ಗಳನ್ನು ಸಹ ಒದಗಿಸಲಾಗುತ್ತದೆ. ಯಾವ ಅತಿಥಿ ಯಾವ ಕೊಠಡಿಯಲ್ಲಿ ತಂಗಿದ್ದಾರೆ ಎಂಬುದು ಯಾರಿಗೂ ತಿಳಿಯದಂತೆ ಕೋಡ್ಸ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ.
ಅಲ್ಲದೆ ತಮ್ಮ ವಿವಾಹಕ್ಕೆ ಬರುವ ಅತಿಥಿಗಳಿಗೆ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ವಿಶೇಷ ಹುಲಿ ಸಫಾರಿಯನ್ನು ವಿಕ್ಕಿ-ಕತ್ರಿನಾ ಜೋಡಿ ಆಯೋಜಿಸಿದೆ. ಇದನ್ನು ಕೂಡ ಗೌಪ್ಯವಾಗಿ ಇರಿಸಲಾಗಿದೆಯಂತೆ. ಜೋಗಿ ಮಹಲ್ ಗೇಟ್ ಮೂಲಕ ಟೈಗರ್ ಸಫಾರಿಗೆ ಅತಿಥಿಗಳು ತೆರಳಲಿದ್ದಾರೆ. ಅಲ್ಲದೆ, ಜೋಗಿ ಮಹಲ್ ಕೆರೆಯ ಮುಂದೆ ಇರುವುದರಿಂದ ವಿಐಪಿಗಳು ಪ್ರಕೃತಿ ಸೌಂದರ್ಯವನ್ನು ಕೂಡ ಸವಿಯಬಹುದಾಗಿದೆ.
ವಿವಾಹಕ್ಕೆ ಬರುವ ಅತಿಥಿಗಳು ಯಾವುದೇ ಫೋಟೋಗಳನ್ನು ಶೂಟ್ ಮಾಡದಂತೆ ಹಾಗೂ ಅವುಗಳನ್ನು ಆನ್ಲೈನ್ನಲ್ಲಿ ಸೋರಿಕೆ ಮಾಡದಂತೆ ಷರತ್ತು ವಿಧಿಸಲಾಗಿದೆ. ಈ ಷರತ್ತಿಗೆ ಅತಿಥಿಗಳು ಸಹಿ ಮಾಡಬೇಕು. ಫೋಟೋಗ್ರಫಿ ಮಾಡಲು ಅವಕಾಶವಿಲ್ಲ, ಸ್ಥಳದ ಮಾಹಿತಿಯನ್ನು ಶೇರ್ ಮಾಡುವಂತಿಲ್ಲ ಹೀಗೆ ಅನೇಕ ನಿಯಮಗಳನ್ನು ಮದುವೆಯಲ್ಲಿ ಅಳವಡಿಸಲಾಗಿದ್ದು, ಆ ನಿಯಮಗಳು ಈ ಕೆಳಕಂಡಂತಿವೆ…
* ಮದುವೆಯ ಹಾಜರಿಯನ್ನು ಯಾರೂ ಬಹಿರಂಗಪಡಿಸುವಂತಿಲ್ಲ.
* ಯಾರೂ ಫೋಟೋಗ್ರಫಿ ಮಾಡುವಂತಿಲ್ಲ.
* ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಫೋಟೋಗಳನ್ನು ಶೇರ್ ಮಾಡುವಂತಿಲ್ಲ.
* ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಮಂಟಪದ ಲೊಕೇಶನ್ ಗಳನ್ನು ಶೇರ್ ಮಾಡುವಂತಿಲ್ಲ.
* ಮದುವೆ ಮಂಟಪಕ್ಕೆ ಪ್ರವೇಶಪಡುವಲ್ಲಿಂದ ಮದುವೆ ಮುಗಿಸಿ ಹೊರ ಹೋಗುವವರೆಗೂ ಹೊರ ಜಗತ್ತಿನ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ.
* ಎಲ್ಲಾ ಫೋಟೋಗಳನ್ನು ವೆಡ್ಡಿಂಗ್ ಪ್ಲ್ಯಾನರ್‌ಗಳ ಅನುಮೋದನೆಯ ಬಳಿಕವೇ ಪ್ರಕಟಿಸಬೇಕು.
* ಮದುವೆ ನಡೆಯುವ ಸ್ಥಳದಲ್ಲಿ ವೀಡಿಯೋ ಆಗಲಿ ಅಥವಾ ರೀಲ್ಸ್ಗಳನ್ನಾಗಲಿ ಮಾಡುವಂತಿಲ್ಲ.
ಸದ್ಯ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಅಭಿಮಾನಿಗಳು ನೆಚ್ಚಿನ ತಾರಾಜೋಡಿ ಮದುವೆ ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಅವರ ಮದುವೆಗೆ ಸಂಬಂಧಿಸಿದ ಪ್ರತಿಯೊಂದು ಸಣ್ಣ ವಿವರಗಳನ್ನು ಓದುತ್ತಿದ್ದು, ಮದುವೆ ಸಂಬಂಧಿಸಿದ ಮತ್ತಷ್ಟು ಅಪ್ಡೇಟ್ಗಳಿಗಾಗಿ ಎದುರು ನೋಡುತ್ತಿದ್ದಾರೆ.