
ಸರಕಾರಿ ಯೋಜನೆಯನ್ನು ಪಡೆಯಲು ಸಾಮೂಹಿಕ ವಿವಾಹದಲ್ಲಿ ಮದುವೆಯಾದ ಅಣ್ಣ-ತಂಗಿ: ವೀಡಿಯೋದಿಂದ ಪ್ರಕರಣ ಬಹಿರಂಗ!
Friday, December 17, 2021
ಫಿರೋಜಾಬಾದ್ (ಉತ್ತರ ಪ್ರದೇಶ): ಕೆಲವೊಬ್ಬರು ಯೋಜನೆಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ಎಂಥಹ ಹೀನಾಯ ಕಾರ್ಯವನ್ನು ಮಾಡಲು ಸಿದ್ಧರಿರುತ್ತಾರೆ. ಇದಕ್ಕೆ ಸಾಕ್ಷಿಯೆಂಬಂತೆ ಉತ್ತರಪ್ರದೇಶದಲ್ಲಿ ಅಣ್ಣನೇ ತಂಗಿಯನ್ನು ವರಿಸಿರುವ ಹೇಯವಾದ ಕೃತ್ಯವೊಂದು ನಡೆದಿದೆ.
ಉತ್ತರ ಪ್ರದೇಶದಲ್ಲಿ ಸಿಎಂ ಸಾಮೂಹಿಕ ವಿವಾಹ ಯೋಜನೆಯಡಿಯಲ್ಲಿ ವಿವಾಹವಾಗುವ ವಧು-ವರರಿಗೆ 35 ಸಾವಿರ ರೂ.ಗಳನ್ನು ನೀಡಲಾಗುತ್ತದೆ ಎಂಬ ಯೋಜನೆಯೊಂದು ಇದೆ. ಇದರಲ್ಲಿ ವಧುವಿನ ಬ್ಯಾಂಕ್ ಖಾತೆಗೆ 20 ಸಾವಿರ ರೂ.ಗಳನ್ನು ಠೇವಣಿ ಮಾಡಿ, 10 ಸಾವಿರ ರೂ.ವನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ಯೋಜನೆಯ ಪ್ರಯೋಜನವನ್ನು ಪಡೆಯುವ ಉದ್ದೇಶದಿಂದ ಅಣ್ಣ-ತಂಗಿಯೇ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿರುವ ಘಟನೆಯೊಂದು ನಡೆದಿದೆ.
ತಂಗಿಗೆ ಬೇರೆ ಕಡೆಗೆ ಮದುವೆ ಮಾಡಿದರೆ ಆ ಹಣ ಆಕೆಯ ಪತಿಗೆ ಹೋಗುತ್ತದೆ ಎಂಬ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎನ್ನಲಾಅಗಿದೆ. ಡಿಸೆಂಬರ್ 11 ರಂದು ಫಿರೋಜಾಬಾದ್‍ನ ತುಂಡ್ಲಾ ಎಂಬಲ್ಲಿ ಸಾಮೂಹಿಕ ವಿವಾಹವೊಂದನ್ನು ಏರ್ಪಡಿಸಲಾಗಿತ್ತು. ಈ ವಿವಾಹದಲ್ಲಿ ಮದುವೆಯಾಗುವ ಜೋಡಿಗೆ ಈ ಯೋಜನೆ ಸಿಗುತ್ತದೆ ಎಂದು ಘೋಷಿಸಲಾಗಿತ್ತು. ಆದ್ದರಿಂದ ಇದರ ಪ್ರಯೋಜನ ಪಡೆಯಲು ಇಂಥದ್ದೊಂದು ನೀಚ ಕೃತ್ಯಕ್ಕೆ ಅಣ್ಣ-ತಂಗಿ ಕೈಹಾಕಿದ್ದಾರೆ.
ಈ ಸಾಮೂಹಿಕ ವಿವಾಹದ ವೀಡಿಯೋವನ್ನು ಮಾಡಲಾಗಿತ್ತು. ಆದರೆ ಗ್ರಾಮಸ್ಥರು ಈ ವೀಡಿಯೋ ದೊರಕಿ ಅಣ್ಣ-ತಂಗಿಯೇ ವಿವಾಹವಾಗಿದ್ದನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಈ ಸಂದರ್ಭವೇ ವಿಚಾರ ಬಹಿರಂಗಗೊಂಡಿದೆ. ಇದೀಗ ಈ ಅಣ್ಣ-ತಂಗಿ ಜೋಡಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಕೂಡ ಇಂಥಹದ್ದೇ ಘಟನೆಯೊಂದು ನಡೆದಿತ್ತು. ಪಂಜಾಬಿಯೋರ್ವನು ತನ್ನ ಸ್ವಂತ ಸಹೋದರಿಯನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯುವ ಸಲುವಾಗಿ ಆಕೆಯನ್ನು ವಿವಾಹವಾಗಿದ್ದ. ಇಬ್ಬರೂ ಪ್ರತ್ಯೇಕವಾಗಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಅದು ರಿಜೆಕ್ಟ್ ಆಗುತ್ತಿದ್ದ ಹಿನ್ನೆಲೆಯಲ್ಲಿ ಮದುವೆಯಾಗಿ ಬಳಿಕ ದಂಪತಿ ಎಂದು ಹೇಳುವ ಮೂಲಕ ವೀಸಾಗೆ ಅರ್ಜಿ ಸಲ್ಲಿಸಿ ಸಿಕ್ಕಿಬಿದ್ದಿದ್ದರು.