!['ಕಾಂಪ್ರೊಮೈಸ್ ಎಂಬ ಮಾತೇ ಇಲ್ಲ': ಮೀಟೂ ಆರೋಪದ ಬಗ್ಗೆ ಏನೂ ಹೇಳದೆ ತಾನು ನಿರ್ದೋಷಿಯೆಂದ ನಟ ಅರ್ಜುನ್ ಸರ್ಜಾ 'ಕಾಂಪ್ರೊಮೈಸ್ ಎಂಬ ಮಾತೇ ಇಲ್ಲ': ಮೀಟೂ ಆರೋಪದ ಬಗ್ಗೆ ಏನೂ ಹೇಳದೆ ತಾನು ನಿರ್ದೋಷಿಯೆಂದ ನಟ ಅರ್ಜುನ್ ಸರ್ಜಾ](https://blogger.googleusercontent.com/img/b/R29vZ2xl/AVvXsEjp6raEjtIEeBWqM-fnUpvjzQcqVnsJRA0E2t0euCICiyGU6eozIq1rg8ZUi-f4zZI7ftN5TRZlakSOMS-6TFSNm3S2lMBlGVwHoOckHv8XJINokoFDHbCF8BOGbaSr25g8OEtDeUw-BCO_/s1600/1638502589457385-0.png)
'ಕಾಂಪ್ರೊಮೈಸ್ ಎಂಬ ಮಾತೇ ಇಲ್ಲ': ಮೀಟೂ ಆರೋಪದ ಬಗ್ಗೆ ಏನೂ ಹೇಳದೆ ತಾನು ನಿರ್ದೋಷಿಯೆಂದ ನಟ ಅರ್ಜುನ್ ಸರ್ಜಾ
Friday, December 3, 2021
ಬೆಂಗಳೂರು: ನಟಿ ಶ್ರುತಿ ಹರಿಹರನ್ ಅವರು ನಟ ಅರ್ಜುನ್ ಸರ್ಜಾ ಮೇಲೆ ಮಾಡಿರುವ ಮೀಟೂ ಆರೋಪ ಮತ್ತೆ ಮುನ್ನೆಲೆಗೆ ಬಂದಿದೆ. ಮೂರು ವರ್ಷಗಳ ಬಳಿಕ ಇದೀಗ ಘಟನೆಯ ಕುರಿತಂತೆ ನಟ ಅರ್ಜುನ್ ಸರ್ಜಾ ಬಾಯ್ಬಿಟ್ಟಿದ್ದಾರೆ. ಮೀಟೂ ಆರೋಪದ ಕುರಿತಂತೆ ಅರ್ಜುನ್ ಸರ್ಜಾ ಏನೂ ಹೇಳದೆ ಏನು ಹೇಳಬೇಕಿತ್ತೋ ಅದನ್ನು ಅವರು ಹೇಳಿಕೊಂಡು ಸತ್ಯ ಏನು ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.
ನಟಿ ಶ್ರುತಿ ಹರಿಹರನ್ ಅವರು ‘ವಿಸ್ಮಯ’ ಸಿನಿಮಾ ಶೂಟಿಂಗ್ ಸಮಯದಲ್ಲಿ ತಾವು ನಟ ಅರ್ಜುನ್ ಸರ್ಜಾರಿಂದ ಮೀಟೂಗೆ ಒಳಗಾಗಿದ್ದಾಗಿ 2018ರಲ್ಲಿ ಹೇಳಿಕೊಂಡಿದ್ದರು. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಾಧಾರವಿರಲಿಲ್ಲ. ಅಲ್ಲದೆ ಅಗತ್ಯ ಸಾಕ್ಷ್ಯಗಳನ್ನು ಒದಗಿಸುವಲ್ಲಿಯೂ ಶ್ರುತಿ ಹರಿಹರನ್ ವಿಫಲರಾಗಿದ್ದಾರೆ ಎಂದು ಹೇಳಿ ಕಬ್ಬನ್ ಪಾರ್ಕ್ ಪೊಲೀಸರು ನ್ಯಾಯಾಲಯಕ್ಕೆ ಬಿ-ರಿಪೋರ್ಟ್ ಸಲ್ಲಿಸಿದ್ದಾರೆ.
ಕೊನೆಗೂ ತನ್ನ ವಿರುದ್ಧ ಸುಳ್ಳು ಮೀಟೂ ಆರೋಪ ಹೊರಿಸಿರುವುದಾಗಿ ಅರ್ಜುನ್ ಸರ್ಜಾ ಹೊಸದಾಗಿ ಏನನ್ನೂ ಹೇಳದೆ ಸತ್ಯ ಏನೆಂಬುದನ್ನು ಹೇಳಿಕೊಂಡಿದ್ದಾರೆ. ಆರೋಪ ಕೇಳಿ ಬಂದ ಸಮಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವೀಡಿಯೋ ತುಣುಕೊಂದನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
‘ಕಾಂಪ್ರೊಮೈಸ್ ಅನ್ನೋ ಪದ ಇಲ್ಲವೇ ಇಲ್ಲ. ಇದು ಎಲ್ಲರಿಗೂ ಒಂದು ಉದಾಹರಣೆಯಾಗಬೇಕು. ಮುಂದೆ ಯಾವ ಅಮಾಯಕರು ಇಂತಹ ಆರೋಪಗಳಿಗೆ ಬಲಿಯಾಗಬಾರದು. ನಾನು ಇದನ್ನು ತಡೆದುಕೊಳ್ಳುತ್ತೇನೆ, ಆದರೆ ತಡೆದುಕೊಳ್ಳದಿರುವ ಬಹಳಷ್ಟು ಜನರು ಇರುತ್ತಾರೆ. ಕಾಲ ನ್ಯಾಯ ಹೇಳಿಯೇ ಹೇಳುತ್ತದೆ, ಈಗಾಗಲೇ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ನಾನು ತಪ್ಪು ಮಾಡಿದಲ್ಲಿ ನನಗೆ, ಅವರು ತಪ್ಪು ಮಾಡಿದ್ದಲ್ಲಿ ಅವರಿಗೆ ಖಂಡಿತ ಶಿಕ್ಷೆ ಆಗಬೇಕು..’ ಎಂದು ಅಂದು ಸುದ್ದಿಗೋಷ್ಠಿಯಲ್ಲಿ ಹೇಳಿರುವ ವೀಡಿಯೋ ತುಣುಕನ್ನು ‘ಸತ್ಯಮೇವ ಜಯತೇ’ ಎಂಬ ಕ್ಯಾಪ್ಷನ್ನೊಂದಿಗೆ ಹಂಚಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ-ರಿಪೋರ್ಟ್ ಸಲ್ಲಿಕೆ ಆಗಿರುವ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯ ಫೋಟೋಗಳನ್ನು ಆ ವೀಡಿಯೋದ ಕೊನೆಯಲ್ಲಿ ಸೇರಿಸಿ ಹಂಚಿಕೊಳ್ಳುವ ಮೂಲಕ ತಾವು ನಿರ್ದೋಷಿ ಎನ್ನುವುದನ್ನು ಪರೋಕ್ಷವಾಗಿ ಒತ್ತಿ ಹೇಳಿದ್ದಾರೆ.