-->
ಕೇರಳ ಮಾಡೆಲ್ ಗಳ ದುರಂತ ಅಂತ್ಯ ಪ್ರಕರಣ: ಸಂಸತ್ತಿನಲ್ಲೂ ಸದ್ದು, ಸಂಸದ ಸುರೇಶ್ ಗೋಪಿ ಗಂಭೀರ ಆರೋಪ

ಕೇರಳ ಮಾಡೆಲ್ ಗಳ ದುರಂತ ಅಂತ್ಯ ಪ್ರಕರಣ: ಸಂಸತ್ತಿನಲ್ಲೂ ಸದ್ದು, ಸಂಸದ ಸುರೇಶ್ ಗೋಪಿ ಗಂಭೀರ ಆರೋಪ

ನವದೆಹಲಿ: ಕೇರಳ ರಾಜ್ಯದಲ್ಲಿ ಸಂಭವಿಸಿರುವ ಮಾಡೆಲ್​ಗಳಿಬ್ಬರ ದುರಂತ ಅಂತ್ಯ ಪ್ರಕರಣವು ಸಂಸತ್ತಿನ ರಾಜ್ಯಸಭೆಯಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಮಾಡೆಲ್​ಗಳಿಬ್ಬರ ಮೃತ್ಯು ಅಪಘಾತದಿಂದ ನಡೆದಿರೋದಲ್ಲ ಬದಲಾಗಿ, ಅದೊಂದು ಕೊಲೆ ಎಂದು ಸಂಸದ ಸುರೇಶ್​ ಗೋಪಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಾದ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. 

"ಮಾಡೆಲ್​ಗಳ ಸಾವು ಪೂರ್ವಯೋಜಿತವಾಗಿದ್ದು, ಇಬ್ಬರ ಮೇಲೆಯೂ ಅತ್ಯಾಚಾರ ಯತ್ನ ನಡೆದಿದೆ. ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಾಡೆಲ್ ಗಳು ಇಬ್ಬರು ಯುವಕರ ರಕ್ಷಣೆಯನ್ನು ಪಡೆದುಕೊಂಡಿದ್ದರು. ಡ್ರಗ್ಸ್​ ವ್ಯಸನಿ ದಾಳಿಕೋರರು ಮಾಡೆಲ್​ಗಳನ್ನು ಹಿಂಬಾಲಿಸಿ ಹತ್ಯೆ ಮಾಡಿದ್ದಾರೆ" ಎಂದು ಸುರೇಶ್​ ಗೋಪಿ ರಾಜ್ಯಸಭೆಯಲ್ಲಿ ಆರೋಪ ಮಾಡಿದ್ದಾರೆ. 

ಮೇಲ್ಮನೆಯಲ್ಲಿ ನಡೆದಿರುವ ನಾರ್ಕೋಟಿಕ್ ಡ್ರಗ್ಸ್ ಹಾಗೂ ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ತಿದ್ದುಪಡಿ) ಬಿಲ್ ಮೇಲೆ ನಡೆದಿರುವ ಚರ್ಚೆಯ ವೇಳೆಗೆ ಸುರೇಶ್​ ಗೋಪಿ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಡ್ರಗ್ಸ್​ ಮಾಫಿಯಾ ಹಾಗೂ ಸರಕಾರಿ ಸಂಸ್ಥೆಗಳ ನಡುವೆ ಅಪವಿತ್ರ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ. 

ಘಟನೆಯ ಹಿನ್ನೆಲೆ:

ಕೇರಳದ ಇಬ್ಬರು ಭರವಸೆಯ ಮಾಡೆಲ್​ಗಳು ನವೆಂಬರ್​ 1ರಂದು ಫೋರ್ಟ್​ ಕೊಚ್ಚಿಯಲ್ಲಿ ನಡೆದ ಡಿಜೆ ಪಾರ್ಟಿ ಮುಗಿಸಿಕೊಂಡು ಮರಳು ಸಂದರ್ಭ ಕೇರಳದ ವ್ಯಟ್ಟಿಲ-ಪಲರಿವಟ್ಟಮ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದ ಭೀಕರ ಅಪಘಾತದಲ್ಲಿ  ದುರ್ಮರಣಕ್ಕೀಡಾಗಿದ್ದರು. ಘಟನೆಯಲ್ಲಿ 2019ರ ಮಿಸ್​ ಕೇರಳ ವಿಜೇತೆ ಅಟ್ಟಿಂಗಲ್​ ಮೂಲದ ಅನ್ಸಿ ಕಬೀರ್​ (25), ತ್ರಿಸ್ಸೂರ್​ ಮೂಲದ ರನ್ನರ್​ ಅಪ್​ ಅಂಜನಾ ಶಾಜನ್​ (24) ಮತ್ತು ಕೆ.ಎ. ಮೊಹಮ್ಮದ್​ ಆಶಿಕ್​ (25) ದಾರುಣವಾಗಿ ಮೃತಪಟ್ಟಿದ್ದರು. 

ಕಾರು ಚಲಾಯಿಸಿದ್ದ ಚಾಲಕ ಅಬ್ದುಲ್​ ರೆಹಮಾನ್​ನನ್ನು ಅತಿವೇಗದ ಚಾಲನೆ ಆರೋಪದಡಿಯಲ್ಲಿ ಬಂಧಿಸಲಾಗಿತ್ತು. ಆ ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಇನ್ನು ಅಪಘಾತಕ್ಕೀಡಾದ ಕಾರನ್ನು ಹಿಂಬಾಲಿಸಿದ್ದ ಆಡಿ ಕಾರಿನಲ್ಲಿದ್ದ ಸೈಜು ಎಂಬಾತನಿಗೂ ಹೋಟೆಲ್​ ನಂಬರ್​ 18 ಮಾಲಕ ರಾಯ್​ಗೂ ಸಂಬಂಧವಿದೆ. ಅದಕ್ಕೆ ಪುಷ್ಟಿ ನೀಡುವಂತೆ ಅಪಘಾತವಾದ ಕೆಲವೇ ಸಮಯದಲ್ಲಿ ಸೈಜು, ರಾಯ್​ರನ್ನು ಸಂಪರ್ಕಿಸಿದ್ದಾರೆ. ರಾಯ್​ ಹಾಗೂ ಸೈಜು ಸ್ನೇಹಿತರು ಎಂದು ತಿಳಿದುಬಂದಿದೆ. 

ಅಪಘಾತದ ಬೆನ್ನಲ್ಲೇ ಸೈಜು, ರಾಯ್​ ಮತ್ತು ಹೋಟೆಲ್​ ಸಿಬ್ಬಂದಿಗಳಿಗೆ ಕರೆ ಮಾಡಿರುವುದು ತಿಳಿದುಬಂದಿದೆ. ಆದರೆ, ಸೈಜು ಹೇಳಿರುವ ಪ್ರಕಾರ ಹೋಟೆಲ್​ನಿಂದ ಹೊರಟ ಮಾಡೆಲ್​ಗಳು ಮತ್ತು ಕಾರಿನ ಚಾಲಕ ಅಬ್ದುಲ್​ ರೆಹಮಾನ್​ ಮದ್ಯದ ಅಮಲಿನಲ್ಲಿ ಇದ್ದಿದ್ದರಿಂದ ಅವರಿಗೆ ಎಚ್ಚರಿಕೆ ನೀಡಲು ಹಾಗೂ ಅತಿ ವೇಗವಾಗಿ ಚಾಲನೆ ಮಾಡದಂತೆ ಹೇಳಲು ಹಿಂಬಾಲಿಸಿದ್ದೆ ಎಂದು ಹೇಳಿದ್ದಾನೆ. ಆದರೆ, ಇದನ್ನು ಒಪ್ಪಲು ಪೊಲೀಸರು ತಯಾರಿಲ್ಲ. ಆ ಬಳಿಕ ಆತನನ್ನು ಬಂಧಿಸಿದ ಬಳಿಕ ಭಯಾನಕ ಸತ್ಯಗಳು ಹೊರ ಬಂದಿತ್ತು. ತನಿಖೆ ಮುಂದುವರಿದಷ್ಟು ಪ್ರಕರಣ ಇನ್ನಷ್ಟು ಜಟಿಲವಾಗುತ್ತಾ ಇನ್ನಷ್ಟು ಟ್ವಿಸ್ಟ್ ಗಳು ದೊರೆಯುತ್ತಲೇ ಇದೆ. ಇನ್ನೆಂಥ ದಿಕ್ಕನ್ನು ಪಡೆಯುತ್ತದೆ ಎಂದು ಕಾದು ನೋಡಬೇಕಷ್ಟೇ.

Ads on article

Advertise in articles 1

advertising articles 2

Advertise under the article