-->
ಅರ್ಚನಾ ರೆಡ್ಡಿ ಕೊಲೆಗೆ ಸ್ಪೋಟಕ ತಿರುವು: ಮಗಳು, ಪ್ರಿಯಕರ ಸೇರಿದಂತೆ ಎಂಟು ಮಂದಿ ಪೊಲೀಸ್ ವಶಕ್ಕೆ

ಅರ್ಚನಾ ರೆಡ್ಡಿ ಕೊಲೆಗೆ ಸ್ಪೋಟಕ ತಿರುವು: ಮಗಳು, ಪ್ರಿಯಕರ ಸೇರಿದಂತೆ ಎಂಟು ಮಂದಿ ಪೊಲೀಸ್ ವಶಕ್ಕೆ

                             ಅರ್ಚನಾ ರೆಡ್ಡಿ


ಬೆಂಗಳೂರು:  ನಗರದ ಬೆಳ್ಳಂದೂರು ನಿವಾಸಿ ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ದೊರಕಿದೆ. ಮಾಜಿ ಪ್ರಿಯಕರನೊಂದಿಗೆ ಸೇರಿ ಆಕೆಯ ಕೊಲೆಗೆ ಮಗಳೇ ಸ್ಕೆಚ್ ಹಾಕಿದ್ದಾಳೆ ಎಂಬ ಸ್ಪೋಟಕ ತಿರುವು ದೊರಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಚನಾ ರೆಡ್ಡಿ ಮಗಳು ಯುವಿಕಾ ರೆಡ್ಡಿ, ಪ್ರಿಯಕರ ನವೀನ್ ಕುಮಾರ್ ಹಾಗೂ ಆತನ ಸಹಚರರು ಸೇರಿದಂತೆ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ಜಿಗಣಿ ಪುರಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಬಂದಿದ್ದ ಅರ್ಚನಾ ರೆಡ್ಡಿ ಮತದಾನ ಮುಗಿಸಿ ಕಾರಿನಲ್ಲಿ ಮನೆಗೆ ಹೋಗುತ್ತಿದ್ದರು‌. ಈ ಸಂದರ್ಭ ಹೊಸೂರು ರಸ್ತೆ ಹೊಸ ರಸ್ತೆ ಜಂಕ್ಷನ್​ನಲ್ಲಿ ಅಡ್ಡಗಟ್ಟಿದ ಈಕೆಯ ಪ್ರಿಯಕರ ನವೀನ್ ಕುಮಾರ್ ಮತ್ತು ಆತನ ಸಹಚರರು ಆಕೆಯನ್ನು ಮಾರ್ಗ ಮಧ್ಯೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಅತ್ತ ತಾಯಿ ಅರ್ಚನಾಳ ಹತ್ಯೆಯ ಬಳಿಕವೂ ಮಗಳು ಯುವಿಕಾ ರೆಡ್ಡಿ, ನವೀನ್ ನೊಂದಿಗೆ ಜತೆ ಇದ್ದಳು ಎಂಬ ಮಾಹಿತಿ ಲಭ್ಯವಾಗಿದೆ. 

                               ಯುವಿಕಾ ರೆಡ್ಡಿ

ಅರ್ಚನಾ ರೆಡ್ಡಿ ಹೆಸರಲ್ಲಿ 30-40 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎನ್ನಲಾಗಿದೆ. ಅರ್ಚನಾಗೆ ಮೊದಲು ಅರವಿಂದ್​ ಎಂಬಾತನೊಂದಿಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕೆಲ ವರ್ಷಗಳ ಹಿಂದೆ ಮೊದಲ ಪತಿಯಿಂದ ದೂರವಾಗಿದ್ದ ಆಕೆ ಸಿದ್ದೀಕ್ ಎಂಬಾತನೊಂದಿಗೆ ಸ್ನೇಹ ಬೆಳೆಸಿ ಆತನೊಂದಿಗೆ ಇದ್ದಳು. ಆ ಬಳಿಕ ಆತನೊಂದಿಗೆ ವೈಮನಸ್ಸು ಬೆಳೆದು ಆತನ ವಿರುದ್ಧ ಠಾಣೆಯ ಮೆಟ್ಟಿಲೇರಿದ್ದಳು. ಆ ಬಳಿಕ ಆತನನ್ನು ತೊರೆದಿದ್ದಳು.

ಈ ನಡುವೆ ಆಕೆಗೆ ಜಿಮ್ ಟ್ರೈನರ್ ನವೀನ್​ ಕುಮಾರ್ ಪರಿಚಯವಾಗಿದೆ. ಆತನೊಂದಿಗೆ ಲಿವ್ ಇನ್ ರಿಲೇಷನ್ ಶಿಪ್ ಹೊಂದಿದ್ದ ಅರ್ಚನಾ, ಬೆಳ್ಳಂದೂರಿನ ಪ್ಲ್ಯಾಟ್​ನಲ್ಲಿ ವಾಸಿಸುತ್ತಿದ್ದಳು. ಆ ಬಳಿಕ ಮೂರು ವರ್ಷಗಳ ಹಿಂದೆ ಏನೂ ಇಲ್ಲದ ನವೀನ್ ದಿಢೀರ್ ಎಂದು ಶ್ರೀಮಂತನಾಗಿದ್ದ. ಈ ನಡುವೆ ಆಸ್ತಿ ಹಾಗೂ ಅಕ್ರಮ ಸಂಬಂಧದ ವಿಚಾರವಾಗಿ ನವೀನ್​ ಮತ್ತು ಅರ್ಚನಾ ನಡುವೆ ಜಗಳ ನಡೆಯುತ್ತಿತ್ತು. ಅಲ್ಲದೆ ನವೀನ್ ಕುಮಾರ್ ಅರ್ಚನಾ ರೆಡ್ಡಿ ಮಗಳು 21 ವರ್ಷದ ಯುವಿಕಾ ರೆಡ್ಡಿಯೊಂದಿಗೂ ಸಂಬಂಧ ಹೊಂದಿದ್ದ. ಇವರಿಬ್ಬರೂ ಎಲ್ಲೆಡೆ ಜೊತೆಜೊತೆಯಾಗಿ ಒಟ್ಟಿಗೆ ಸುತ್ತಾಡಲು ಆರಂಭಿಸಿದ್ದಾರೆ

ಇದು ಅರ್ಚನಾಗೆ ಇರಿಸುಮುರಿಸು ತಂದಿದೆ. ಆದ್ದರಿಂದ ಆಕೆ ಕುಖ್ಯಾತ ರೌಡಿಗೆ ಹೇಳಿ ನವೀನ್ ಕುಮಾರ್ ಗೆ ಧಮ್ಕಿ ಹಾಕಿಸಿದ್ದಳು. ಈ ನಡುವೆ ರೌಡಿಯೋರ್ವನೊಂದಿಗೆ ಅರ್ಚನಾ ಆತ್ಮೀಯವಾಗಿರುವುದು ಆತನಿಗೆ ತಿಳಿದು ಬಂದಿದೆ. ಇದೆಲ್ಲದರಿಂದ ಕೋಪಗೊಂಡಿದ್ದ ನವೀನ್​ ಸಹಿಸದೆ ಆಕೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ. 

        ‌‌‌‌‌            ‌‌‌      ನವೀನ್ ಕುಮಾರ್

ಅರ್ಚನಾ ರೆಡ್ಡಿ ಜಿಗಣಿಯಲ್ಲಿ ಚುನಾವಣೆ ಇದ್ದ ಕಾರಣ ಮತದಾನ ಮಾಡಲು ಬಂದಿದ್ದರು. ಆದರೆ, ಜಿಗಣಿಯ ವಾರ್ಡ್​ ನಂ 18ರಲ್ಲಿ ಆಕೆಯ ಹೆಸರಿರದ ಕಾರಣ ಮತದಾನ ಮಾಡದೆ ಹಿಂದಿರುಗಿದ್ದರು. ಜಿಗಣಿಯಲ್ಲಿರುವ ಮನೆಯಲ್ಲಿ ರಾತ್ರಿವರೆಗೂ ಇದ್ದು, ಬಳಿಕ ಬೆಳ್ಳಂದೂರಿನಲ್ಲಿರುವ ಮನೆಗೆ ಹಿಂತಿರುಗುತ್ತಿದ್ದರು. 

ನವೀನ್ ಹಾಗೂ ಆತನ ಸಹಚರರು ಜಿಗಣಿಯಿಂದ ಅರ್ಚನಾಳ ಕಾರನ್ನು ಹಿಂಬಾಲಿಸಿಕೊಂಡು ಬಂದಿತ್ತು. ಹೊಸ ರೋಡ್​ ಜಂಕ್ಷನ್​ ಬಳಿ ಸಿಗ್ನಲ್​ ಬೀಳುತ್ತಿದ್ದಂತೆ ಕಾರಿನ ಮೇಲೆ ಆರೋಪಿಗಳು ದಾಳಿ ನಡೆಸಿದ್ದರು.  ದಾಳಿಯಾಗುತ್ತಿರುವುದನ್ನು ಅರಿತ ಕಾರು ಚಾಲಕ ಕಾರನ್ನು ಫುಟ್​ಪಾತ್​ ಮೇಲೆ ಹರಿಸಿ ತಪ್ಪಿಸಿಕೊಳ್ಳಲು ವಿಫಲ ಯತ್ನ ನಡೆಸಿದ್ದ. ಕಾರು ಹರಿದ ರಭಸಕ್ಕೆ ಫುಟ್​ಪಾತ್​ ಮೇಲಿನ ಕಂಬಿಗಳು ತುಂಡಾಗಿವೆ. ಆರೋಪಿಗಳು ಬಂದಿದ್ದ ಸ್ಕೂಟರ್​ಗೂ ಕಾರು ಡಿಕ್ಕಿ ಹೊಡೆದು ಜಖಂ ಆಗಿದೆ. ಬಳಿಕ ಆರೋಪಿಗಳು ಕಾರಿನ ಬಾಗಿಲಿನ ಗಾಜುಗಳನ್ನು ಬ್ಯಾಟ್​ ಹಾಗೂ ಲಾಂಗ್​ನಿಂದ ಒಡೆದಿದ್ದಾರೆ. ಅರ್ಚನಾ ರೆಡ್ಡಿಯನ್ನು ಕಾರಿನಿಂದ ಬಲವಂತವಾಗಿ ಕೆಳಗಿಳಿಸಿ ರಸ್ತೆ ಮಧ್ಯೆ ಎಳೆದುಕೊಂಡು ಹೋದವರು ಮಾರಕಾಸ್ತ್ರದಿಂದ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಇದಾದ ಬಳಿಕ ಕಾರಿನಲ್ಲಿದ್ದ ಕುಮಾರ್​ ಹಾಗೂ ಚಾಲಕ ಪ್ರಮೋದ್​ಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಅಷ್ಟರಲ್ಲಿ ಅವರಿಬ್ಬರು ಓಡಿಹೋಗಿ ಆರೋಪಿಗಳಿಂದ ತಪ್ಪಿಸಿಕೊಂಡಿದ್ದಾರೆ. 

ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಅರ್ಚನಾ ಮೃತಪಟ್ಟಿರುವುದು ಕಂಡು ಬಂದಿತ್ತು. ನಂತರ ಮಗ ಕುಮಾರ್​ ಹೇಳಿಕೆ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೂವರು ಆರೋಪಿಗಳು ನಡುರಸ್ತೆಯಲ್ಲಿ ಅರ್ಚನಾ ಮೇಲೆ ಮಾರಕಾಸ್ತ್ರಗಳಿಂದ ಭೀಕರವಾಗಿ ಹಲ್ಲೆ ನಡೆಸುವ ದೃಶ್ಯವನ್ನು ಸ್ಥಳಿಯರು ಮೊಬೈಲ್​ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ವೈರಲ್​ ಆಗಿದೆ. ಇದೀಗ ಅರ್ಚನಾ ರೆಡ್ಡಿ ಮಗಳು, ಪ್ರಿಯಕರ ನವೀನ್ ಸೇರಿದಂತೆ 8 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article