
ಕೇವಲ ಬಿಯರ್, ಸಿಗರೇಟ್ ಗಾಗಿ ಬೆಂಗಳೂರಿನಲ್ಲಿ ನಡೆಯಿತು ನೈಜಿರಿಯಾ ಮೂಲದ ಪ್ರಜೆಯ ಹತ್ಯೆ: ಮೂವರು ಆರೋಪಿಗಳು ಅರೆಸ್ಟ್
Tuesday, December 14, 2021
ಬೆಂಗಳೂರು: ಬೆಂಗಳೂರಿನ ಯುವತಿಯೋರ್ವಳನ್ನು ಪ್ರೀತಿಸಿ ವಿವಾಹವಾಗಿದ್ದ, ನೈಜೀರಿಯಾ ಮೂಲದ ಪ್ರಜೆಯೋರ್ವನು ಕೇವಲ ಬಿಯರ್ ಹಾಗೂ ಸಿಗರೇಟ್ ವಿಚಾರಕ್ಕಾಗಿ ಕೊಲೆಯಾಗಿದ್ದಾನೆ.
ನೈಜೀರಿಯಾ ಮೂಲದ ವಿಕ್ಟರ್ ಎಂಬಾತ ಕೊಲೆಯಾದವ. ಈತ ಕಳೆದ ಹತ್ತು ವರ್ಷಗಳಿಂದ ಬೆಂಗಳೂರಿನ ನಿವಾಸಿಯಾಗಿದ್ದ. ಈ ನಡುವೆ ಈತ ಬೆಂಗಳೂರಿನ ಯುವತಿಯೋರ್ವಳನ್ನು ಪ್ರೀತಿಸಿ ವಿವಾಹವಾಗಿದ್ದ. ಆದರೆ ಆತ ನಿನ್ನೆ ರಾತ್ರಿ ಬಾಣಸವಾಡಿಯ ಕಮ್ಮನಹಳ್ಳಿ ರಸ್ತೆಯಲ್ಲಿ ಹತ್ಯೆಗೀಡಾಗಿದ್ದ.
ಹರಿತವಾದ ಆಯುಧದಿಂದ ವಿಕ್ಟರ್ ನನ್ನು ಇರಿದು ಕೊಲೆ ಮಾಡಲಾಗಿತ್ತು. ದುಷ್ಕರ್ಮಿಗಳು ಆತನಿಗೆ ಇರಿದ ಸ್ಥಳದಲ್ಲಿಯೇ ಕುಸಿದು ಮೃತಪಟ್ಟಿದ್ದು, ಮೃತದೇಹ ಸಂಪೂರ್ಣ ರಕ್ತಸಿಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸರು ಇಂದು ಮೂವರನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆ ಹಾಗೂ ಬಂಧಿತರ ಕುರಿತು ಪೂರ್ವ ವಿಭಾಗದ ಡಿಸಿಪಿ ಡಾ.ಎಸ್.ಡಿ. ಶರಣಪ್ಪ ಮಾಹಿತಿ ನೀಡಿ, "ಪ್ರಕರಣ ತನಿಖೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿತ್ತು. ತಂಡ ಮೊನ್ನೆ ರಾತ್ರಿಯೇ ಕಾರ್ಯಾಚರಣೆಗೆ ಇಳಿದಿದ್ದು, ಮೂವರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗಳಾದ ಅರುಣ್, ನೀಲಕಂಠ ಮತ್ತು ಪಿಲಿಫ್ ರಾಜ್ ಬಂಧಿಸಿದ್ದಾರೆ.
ಆರೋಪಿಗಳು ರಾತ್ರಿ ವೇಳೆ ವಿಕ್ಟರ್ ನಡೆದುಕೊಂಡು ಹೋಗುತ್ತಿದ್ದಾಗ ಬಿಯರ್ ಹಾಗೂ ಸಿಗರೇಟ್ ಕೇಳಿದ್ದಾರೆ. ಆತ ಅದನ್ನು ಕೊಡಲು ನಿರಾಕರಿಸಿದ್ದಾನೆ. ಇದರಿಂದ ಆರೋಪಿಗಳು ಹಾಗೂ ವಿಕ್ಟರ್ ನಡುವೆ ವಾಗ್ವಾದ ಉಂಟಾಗಿ, ಜಗಳ ಉಂಟಾಗಿದೆ.
ಈ ಸಂದರ್ಭ ವಿಕ್ಟರ್ ಅವರಿಗೆ ಬಿಯರ್ ಬಾಟಲಿಯಿಂದ ಹೊಡೆದಿದ್ದಾನೆ. ಆಗ ಆರೋಪಿಗಳು ಅದೇ ಬಿಯರ್ ಬಾಟಲಿಯ ಚೂರು ಹಾಗೂ ಹರಿತವಾದ ಆಯುಧಗಳಿಂದ ಆರೋಪಿಗಳು ವಿಕ್ಟರ್ನನ್ನು ಚುಚ್ಚಿ ಸಾಯಿಸಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.
ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡರೂ, ಆದರೂ ಅವರ ನಡೆ ಅನುಮಾನಾಸ್ಪದವಾಗಿದೆ ಎಂದು ಹೀಗಾಗಿ ಸದ್ಯ ತನಿಖೆ ಮುಂದುವರಿಸಲಾಗಿದ್ದು, ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.