
ಐದು ತಿಂಗಳ ಗರ್ಭಿಣಿ ಪತ್ನಿಯನ್ನೇ ನದಿಗೆ ತಳ್ಳಿ ಕೊಲೆಗೈದ ಪಾಪಿ ಪತಿ: ಮಕ್ಕಳು ಪಾರು
Thursday, December 16, 2021
ಮೈಸೂರು: ಐದು ತಿಂಗಳ ಗರ್ಭಿಣಿ ಪತ್ನಿಯನ್ನು ಪತಿಯೇ ಕಪಿಲಾ ನದಿಗೆ ತಳ್ಳಿ ಕೊಲೆಗೈದ ಅಮಾನವೀಯ ಘಟನೆ ನಂಜನಗೂಡಿನಲ್ಲಿ ಸಂಭವಿಸಿದೆ.
ನಂಜನಗೂಡು ತಾಲೂಕು ಮುದ್ದಹಳ್ಳಿಯ ದೇವಿ(28) ಕೊಲೆಯಾದ ದುರ್ದೈವಿ. ಈಕೆಯ ಪತಿ ರಾಜೇಶ್ ಕೊಲೆ ಆರೋಪಿ.
ನಂಜನಗೂಡು ಪಟ್ಟಣದ ಅಯ್ಯಪ್ಪಸ್ವಾಮಿ ದೇವಾಲಯದ ಸಮೀಪದಲ್ಲಿ ಹರಿಯುತ್ತಿರುವ ಕಪಿಲಾ ನದಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ತಳ್ಳಿ ಸಾಯಿಸಲು ರಾಜೇಶ್ ಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಕಸುವಿನಹಳ್ಳಿ ಗ್ರಾಮ ದೇವಿಗೆ ರಾಜೇಶ್ ನೊಂದಿಗೆ ಆರೇಳು ವರ್ಷದ ಹಿಂದೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಇದೀಗ ದೇವು ಮೂರನೇ ಮಗುವಿನ ಗರ್ಭಿಣಿಯಾಗಿದ್ದರು. 5 ತಿಂಗಳ ಗರ್ಭಿಣಿಯಾಗಿದ್ದ ದೇವಿಯನ್ನು ಪತಿ ರಾಜೇಶ್ ಸ್ಕ್ಯಾನಿಂಗ್ ಸೆಂಟರ್ಗೆಂದು ಮುದ್ದಹಳ್ಳಿ ಗ್ರಾಮದಿಂದ ನಂಜನಗೂಡು ಪಟ್ಟಣಕ್ಕೆ ರಾಜೇಶ್ ಕರೆತಂದಿದ್ದ. ಜೊತೆಗೆ ಇಬ್ಬರು ಮಕ್ಕಳನ್ನೂ ಕರೆದುಕೊಂಡು ಬಂದಿದ್ದ.
ಸಮೀಪದ ದೇವಾಲಯಕ್ಕೆ ಹೋಗುವ ಎಂದು ಕರೆದೊಯ್ದ ರಾಜೇಶ್, ಪತ್ನಿಯನ್ನು ನೀರಿಗೆ ತಳ್ಳಿ ಕೊಲೆಗೈದಿದ್ದಾನೆ. ಆ ಬಳಿಕ ಇಬ್ಬರು ಮಕ್ಕಳನ್ನೂ ನದಿಯಲ್ಲಿ ಮುಳುಗಿಸಿ ಸಾಯಿಸಲು ಯತ್ನಿಸುತ್ತಿದ್ದ ವೇಳೆ ಮೀನುಗಾರರು ಆ ಮಕ್ಕಳನ್ನು ರಕ್ಷಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಆರೋಪಿ ಪತಿ ರಾಜೇಶ್ನನ್ನು ನಂಜನಗೂಡು ಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಪತ್ನಿಯ ಹೊಟ್ಟೆಯಲ್ಲಿದ್ದ ಮೂರನೇ ಮಗುವಿನ ನಿರೀಕ್ಷೆಯಲ್ಲಿರಬೇಕಾದಾತ ಇಡೀ ಕುಟುಂಬವನ್ನೇ ಕೊಲ್ಲಲು ಸಂಚು ರೂಪಿಸಿದ್ದ. ಯಾಕಾಗಿ ಈ ಸಂಚು ರೂಪಿಸಿದ್ದ ಎಂದು ಇನ್ನೂ ತಿಳಿದುಬಂದಿಲ್ಲ.