
ಪ್ರೇಯಸಿಯ ಕತ್ತು ಹಿಸುಕಿ ಕೊಲೆಗೈದ ಪ್ರಿಯಕರ: ಮದುವೆ ಸಿದ್ಧತೆಯಲ್ಲಿದ್ದ ಆಕೆ ಮಸಣಕ್ಕೆ, ಈತ ಜೈಲಿಗೆ
Friday, December 17, 2021
ಬೆಂಗಳೂರು: ದುಡ್ಡಿಗೋಸ್ಕರ ಯುವಕನೋರ್ವನು ಪ್ರೇಯಸಿಯ ಕತ್ತು ಹಿಸುಕಿ ಕೊಲೆಗೈದಿರುವ ಘಟನೆ ಯಲಹಂಕದ ನ್ಯೂಟೌನ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಉಡುಪಿ ಮೂಲದ ಗಂಗಾ ಎಂಬಾಕೆ ಕೊಲೆಯಾದ ದುರ್ದೈವಿ ಪ್ರೇಯಸಿ. ದಾಂಡೇಲಿ ಮೂಲದ 27 ವರ್ಷದ ಶ್ಯಾಮು ಕೊಲೆಗೈದ ಪ್ರಿಯಕರ. ಇದೀಗ ಈತನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಹಲವು ವರ್ಷಗಳಿಂದ ಬೆಂಗಳೂರು ನಗರದಲ್ಲಿ ನೆಲೆಸಿದ್ದ ಶ್ಯಾಮು, ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯೋಗ ತರಬೇತಿ ಕೇಂದ್ರವೊಂದರಲ್ಲಿ ಯೋಗ ಶಿಕ್ಷಕನಾಗಿ ವೃತ್ತಿ ನಿರ್ವಹಿಸುತ್ತಿದ್ದ. ಮೂರು ವರ್ಷಗಳ ಹಿಂದೆ ಇದೇ ಯೋಗ ತರಬೇತಿ ಕೇಂದ್ರಕ್ಕೆ ಗಂಗಾ ಸೇರಿಕೊಂಡಿದ್ದರು. ಹೀಗೆ ಪರಿಚಯಗೊಂಡಿದ್ದ ಇವರಿಬ್ಬರು, ಕಾಲಕ್ರಮೇಣ ಒಬ್ಬರನ್ನೊಬ್ಬರು ಪ್ರೀತಿಸಲು ತೊಡಗಿದ್ದಾರೆ. ಆ ಬಳಿಕ ಅವರು ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು.
ಅಲ್ಲದೆ ಇಬ್ಬರೂ ತಮ್ಮ ಎರಡು ಕುಟುಂಬದವರನ್ನು ಒಪ್ಪಿಸಿ ಫೆಬ್ರವರಿಯಲ್ಲಿ ಮದುವೆ ಮಾಡಿಕೊಳ್ಳಲು ಸಿದ್ಧತೆಗಳನ್ನು ಸಹ ನಡೆಸಿದ್ದರು. ಆದರೆ ಪ್ರಿಯಕರನಿಂದ 1ಲಕ್ಷ ರೂ. ಸಾಲ ಪಡೆದುಕೊಂಡಿದ್ದ ಗಂಗಾ ಹಲವು ತಿಂಗಳಾದರೂ ವಾಪಸ್ ನೀಡಿರಲಿಲ್ಲ. ಇದೇ ವಿಚಾರಕ್ಕಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತಿತ್ತು.
ಕಳೆದ ಬುಧವಾರ ರಾತ್ರಿಯೂ ಸಹ ಹಣದ ವಿಚಾರಕ್ಕಾಗಿ ಜಗಳ ಆರಂಭವಾಗಿತ್ತು. ನೋಡು ನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಸಾಲದ ಹಣವನ್ನು ವಾಪಸ್ ಕೊಡುವುದಿಲ್ಲ ಎಂದಿದ್ದಕ್ಕೆ ಅಕ್ರೋಶಗೊಂಡ ಆರೋಪಿ ಶ್ಯಾಮು, ಗಂಗಾ ತಲೆಯನ್ನು ಗೋಡೆಗೆ ಒತ್ತಿಹಿಡಿದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆದರೆ, ಪೊಲೀಸರೆದುರು ಆತ್ಮಹತ್ಯೆ ಎಂದು ಕಥೆ ಕಟ್ಟಿ ನಂಬಿಸಿದ್ದಾನೆ. ಆದರೆ, ಅನುಮಾನಗೊಂಡು ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾನೆ.
ಇದೀಗ ಆರೋಪಿಯನ್ನು ಬಂಧಿಸಿರುವ ಯಲಹಂಕದ ನ್ಯೂಟೌನ್ ಠಾಣೆಯ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.