ಮಡದಿಯನ್ನೇ ಕೊಂದು ಪುತ್ರನೆದುರು ಗೋಳಾಡಿದ ಪತಿ: ಮನೆಯ ಮುಂದೆಯೇ ಅಡಗಿದ್ದ ರಹಸ್ಯ ಕೃತ್ಯ ಮಗನಿಂದ ಬಯಲು
Tuesday, December 21, 2021
ಮಧುಗಿರಿ: "ಸಂಬಂಧಿಕರೊಬ್ಬರ ತಿಥಿಗೆಂದು ಹೋದಾಕೆ ಇನ್ನೂ ವಾಪಸ್ ಮನೆಗೂ ಬಂದಿಲ್ಲ ಕಣಪ್ಪ. ಸಂಬಂಧಿಕರ ಮನೆಗೂ ಹೋಗಿಲ್ಲವಂತೆ. ಎಲ್ಲಿಗೆ ಹೋಗಿದ್ದಾಳೋ ಗೊತ್ತಿಲ್ಲ. ನಾನೂ ಹುಡುಕುವೆ, ನೀನು ಹುಡುಕಿಕೊಂಡು ಬಾರಪ್ಪ" ಎಂದು ಮಗನೆದುರು ಗೋಳಾಟ ಮಾಡಿರುವ ತಂದೆಯ ಬಗ್ಗೆಯೇ ಅನುಮಾನದಿಂದ ಪೊಲೀಸ್ ದೂರು ದಾಖಲಿಸಿದಾಗ, ಅಸಲಿಯತ್ತು ಬಯಲಾದ ಘಟನೆಯೊಂದು ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಗರಣಿ ಗ್ರಾಮದಲ್ಲಿ ನಡೆದಿದೆ.
ತಂದೆಯ ಗೋಳಾಟವನ್ನು ನೋಡಿದವರು ಯಾರಿಗೂ ಅಯ್ಯೋ ಪಾಪ ಅನ್ನಿಸದಿರಲು ಸಾಧ್ಯವೇ ಇಲ್ಲ. ಆದರೂ ಮಗನಿಗೆ ಸಣ್ಣದೊಂದು ಅನುಮಾನ ಕಾಡಲಾರಂಭಿಸಿದೆ. ಏನೇ ಇರಲಿ ಎಂದು ಆತ, ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾನೆ. ಆಗ ಮನೆ ಮುಂದೆಯೇ ಅಡಗಿರುವ ಕರಾಳ ರಹಸ್ಯವೊಂದು ಬಯಲಾಗಿದೆ. ಇದನ್ನು ನೋಡಿದ ಮಗನೂ ಸೇರಿದಂತೆ ಸ್ಥಳೀಯರೂ ಬೆಚ್ಚಿಬಿದ್ದಿದ್ದಾರೆ.
ಮಧುಗಿರಿ ತಾಲೂಕಿನ ಐ.ಡಿ.ಹಳ್ಳಿ ಹೋಬಳಿಯ ಗರಣಿ ಗ್ರಾಮದ ಸಿದ್ದಪ್ಪ ಎಂಬಾತನ ಪತ್ನಿ ಅಲಮೇಲಮ್ಮ(45) ಇತ್ತೀಚಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ತಾಯಿಗಾಗಿ ಹುಡುಕಾಟ ನಡೆಸಿರುವ ಪುತ್ರ ರಂಜಿತ್ಗೆ ತಂದೆಯ ಮೇಲೆಯೇ ಸಂಶಯ ದಟ್ಟವಾದ ಕಾಡಲಾರಂಭಿಸಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಂತೆ ಆತನ ಅಸಲಿ ಮುಖ ಬಯಲಾಗಿದೆ.
ಮಗ ನೀಡಿರುವ ದೂರಿನನ್ವಯ ತಂದೆ ಸಿದ್ದಪ್ಪನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಆತನ ಕೃತ್ಯ ಬಯಲಾಗಿದೆ. ಆರೋಪಿ ಸಿದ್ದಪ್ಪ ಜಮೀನಿನ ವಿಚಾರವಾಗಿ ಪತ್ನಿಯನ್ನೇ ಕೊಂದು ಮನೆಯ ಮುಂಭಾಗ ಹೂತುಹಾಕಿ ಸಾಕ್ಷ್ಯ ನಾಶಪಡಿಸಲು ಆಕೆಯ ಸೀರೆ ಮತ್ತು ಮಾಂಗಲ್ಯ ಸರವನ್ನು ಸುಟ್ಟು ಹಾಕಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಸೋಮವಾರ ಕೊರಟಗೆರೆ ತಹಶೀಲ್ದಾರ್ ನಾಹಿದಾ ಜಮ್ಜಮ್ ಮತ್ತು ಸಿಪಿಐ ಸರ್ದಾರ್ ಸಮ್ಮುಖದಲ್ಲಿ ಮೃತದೇಹವನ್ನು ಹೊರ ತೆಗೆದು ಪಂಚನಾಮೆ ನಡೆಸಲಾಗಿದೆ. ತಕ್ಷಣ ಆರೋಪಿ ಸಿದ್ದಪ್ಪನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.