
ಸೌತ್ ಲೇಡಿ ಸೂಪರ್ ಸ್ಟಾರ್ ಆರಂಭಿಸಿದ್ದಾರೆ ಹೊಸ ಕಾಸ್ಮೆಟಿಕ್ ಕಂಪೆನಿ: ಮಹಿಳೆಯರು, ಪುರುಷರಿಗೂ ಇಲ್ಲಿದೆಯಂತೆ ಸೌಂದರ್ಯವರ್ಧಕ ಸಾಧನಗಳು
Tuesday, December 14, 2021
ಚೆನೈ: ಇತ್ತೀಚಿನ ದಿನಗಳಲ್ಲಿ ನಟ- ನಟಿಯರು ಸಿನಿಮಾಗಳಲ್ಲಿ ಅಭಿನಯಿಸುವುದಲ್ಲದೆ, ವ್ಯಾಪಾರ ವಹಿವಾಟುಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದಾಯವನ್ನು ಸಿಕ್ಕಾಪಟ್ಟೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೀಗ ದಕ್ಷಿಣದ ಲೇಡಿ ಸೂಪರ್ ಸ್ಟಾರ್ ನಯನತಾರಾ, ಡಿಸೆಂಬರ್ 2021ರಲ್ಲಿ ಹೊಸ ಕಾಸ್ಮಟಿಕ್ ಕಂಪೆನಿಯೊಂದನ್ನು ಆರಂಭಿಸಿದ್ದಾರೆ. ಅವರ ಕಂಪೆನಿಯು ವಿವಿಧ ಸೌಂದರ್ಯ ವರ್ಧಕ ಉತ್ಪನ್ನಗಳ ಮೇಲೆ ಗಮನಹರಿಸುತ್ತಿದ್ದು, ಜೊತೆಗೆ ಹಲ ಬಗೆಯ ತುಟಿ ಉತ್ಪನ್ನಗಳ ಸಂಗ್ರಹವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ನಟಿ ನಯನತಾರಾರ ಕಂಪೆನಿಯು ಸೌಂದರ್ಯ ಉತ್ಪನ್ನವನ್ನು ಲಿಂಗ ತಟಸ್ಥಗೊಳಿಸುವತ್ತ ಗಮನಹರಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಏಕೆಂದರೆ , ಈಗ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಪುರುಷರೂ ಬಳಸುವುದಕ್ಕೆ ಆರಂಭಿಸಿದ್ದಾರೆ. ತಮ್ಮ ಕಂಪೆನಿಯ ಆರಂಭದ ದಿನದಂದು ಈ ಬಗ್ಗೆ ಮಾತನಾಡಿದ ನಟಿ , 'ತ್ವಚೆಯ ಉತ್ಪನ್ನಗಳ ವಿಚಾರದಲ್ಲಿ ನಾನು ಯಾವತ್ತು ರಾಜಿಯಾಗುವುದಿಲ್ಲ. ನನ್ನ ವೈಯುಕ್ತಿಕ ಆರೈಕೆಗೆ, ಹೆಚ್ಚಿನ ಕಾರ್ಯಕ್ಷಮತೆ ಹಾಗೂ ಸುರಕ್ಷತೆಗಾಗಿ ನಾನು ಹೇಗೆ ಪ್ರಾಮುಖ್ಯತೆ ನೀಡುತ್ತೇನೆಯೋ, ಅದೇ ಮೌಲ್ಯಗಳನ್ನು ನನ್ನ ಕಂಪೆನಿಯ ಉತ್ಪನ್ನಗಳ ವಿಚಾರದಲ್ಲೂ ಪಾಲಿಸುವೆ” ಎಂದು ತಿಳಿಸಿದ್ದಾರೆ .
ಅಂದಹಾಗೆ ನಯನತಾರಾ ಅವರ ಕಂಪೆನಿಯ ಹೆಸರು " ದಿ ಲಿಪ್ ಬಾಮ್ ಕಂಪನಿ” ಎಂದಾಗಿದ್ದು, ಇದಕ್ಕೆ ಖ್ಯಾತ ಸೌಂದರ್ಯ ತಜ್ಞೆ ರೆನಿಟಾ ರಾಜನ್ ಅವರೊಟ್ಟಿಗೆ ಕೈಜೋಡಿಸಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿಯ ಈ ಹೊಸ ಕಂಪೆನಿಯಿಂದ ಎಲ್ಲ ವರ್ಗದವರಿಗೆ, ಎಲ್ಲಾ ಲಿಂಗದವರಿಗೆ ಹೊಂದುವಂತಹ ಲಿಪ್ ಬಾಮ್ ಒಂದನ್ನು ಬಿಡುಗಡೆ ಮಾಡಿದ್ದರು. ಆ ಲಿಪ್ ಬಾಮ್‌ಗೆ ಈಗ ಉತ್ತಮ ಬೇಡಿಕೆ ಇದೆ. ಈ ಮೂಲಕ ನಟಿ ನಯನತಾರಾ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಬಹುದು.
ಇನ್ನು ನಯನತಾರ ನಟನೆಯ ವಿಚಾರಕ್ಕೆ ಬಂದರೆ, ನಟ ಶಾರುಖ್ ಖಾನ್ ಅವರ 'ಲಯನ್', ಪೃಥ್ವಿರಾಜ್ ಸುಕುಮಾರನ್ ರೊಂದಿಗೆ 'ಗೋಲ್ಡ್ ', ತಮಿಳಿನಲ್ಲಿ 'ಕಾಳಂಗಳ್' , ನಟ ಚಿರಂಜೀವಿ ಜೊತೆಗೆ 'ಗಾಡ್ ಫಾದರ್' ಹಾಗೂ ಇನ್ನು 5 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.