ಪನಾಮ ಪೇಪರ್ಸ್ ಹಗರಣ: ಐಶ್ವರ್ಯಾ ರೈಗೆ ತಲೆದೋರಿದ ಸಂಕಷ್ಟ
Tuesday, December 21, 2021
ಮುಂಬೈ: ದೇಶ - ವಿದೇಶಗಳಲ್ಲೂ ಭಾರಿ ಸಂಚಲನ ಸೃಷ್ಟಿಸಿರುವ ಪನಾಮಾ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ನಟಿ ಐಶ್ವರ್ಯಾ ರೈ ಬಚ್ಚನ್‌ಗೆ ಈಗ ಸಂಕಷ್ಟ ತಲೆದೋರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಸಮನ್ಸ್ ಜಾರಿ ಮಾಡಿದೆ.
ಮೊಸಾಕ್ ಫೋನ್ಸೆಕಾ ಎಂಬ ಜಗತ್ತಿನ 4ನೇ ಅತಿ ದೊಡ್ಡ ಸಂಸ್ಥೆಯು ಜಗತ್ತಿನಲ್ಲಿಯೇ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ 2016ರಲ್ಲಿ ಹನ್ನೊಂದೂವರೆ ಮಿಲಿಯನ್‌ನಷ್ಟು ದಾಖಲೆಗಳನ್ನು ತಯಾರಿಸಿದೆ. ಅದೇ ಪನಾಮ ಪೇಪರ್ಸ್ ಹಗರಣ. ವಿದೇಶಗಳಲ್ಲಿ ಅಕ್ರಮವಾಗಿ ಹೇಗೆ, ಯಾರೆಲ್ಲಾ ಇಲ್ಲಿ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂಬುದರ ಎಲ್ಲಾ ಮಾಹಿತಿಗಳು ಇದರಲ್ಲಿವೆ.
12 ರಾಷ್ಟ್ರೀಯ ನಾಯಕರ ಹೆಸರುಗಳು ಸೇರಿದಂತೆ, ದೊಡ್ಡ ದೊಡ್ಡ ಸೆಲೆಬ್ರಿಟಿಗಳ ಹೆಸರೂ ಇದರಲ್ಲಿ ಇವೆ. ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಷರೀಫ್, ಇರಾಕ್‌ನ ಮಾಜಿ ಉಪರಾಷ್ಟ್ರಪತಿ ಅಯಾದ್ ಅಲ್ಲವಿ, ಉಕ್ರೇನ್ ರಾಷ್ಟ್ರಪತಿ ಪೆಟ್ರೋ ಪೊರೊಶೆಂಕೋ, ಈಜಿಪ್ಟ್ ನ ಮಾಜಿ ರಾಷ್ಟ್ರಪತಿಯ ಮಗ ಅಲಾ ಮುಬಾರಕ್, ಐಸ್ ಲ್ಯಾಂಡ್‌ನ ಪ್ರಧಾನಿಯ ಹೆಸರುಗಳು ಇದೆ. ಭಾರತದ ವಿಚಾರಕ್ಕೆ ಬಂದರೆ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಐಶ್ವರ್ಯಾ ಬಚ್ಚನ್ ಸೇರಿದಂತೆ ಸುಮಾರು 500 ಪ್ರಮುಖ ಭಾರತೀಯರ ಹೆಸರುಗಳು, ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರುಗಳಿವೆ. ಜರ್ಮನಿಯ ಪತ್ರಿಕೆಯೊಂದು ಇದನ್ನು ಬಹಿರಂಗಗೊಳಿಸಿತ್ತು. ಆ ಬಳಿಕ ಅಂತಾರಾಷ್ಟ್ರೀಯ ಮಟ್ಟದ ತನಿಖಾ ಪತ್ರಕರ್ತರ ಒಕ್ಕೂಟದಿಂದ ಈ ಪನಾಮ ಪೇಪರ್ಸ್ ಹಗರಣ ಇದೀಗ ಬಹಿರಂಗಗೊಂಡಿದೆ. ಈ ಮಧ್ಯೆ ಈ ಪೇಪರ್ ಲೀಕ್ ಮಾಡಿರುವ ಪತ್ರಕರ್ತೆಯ ಹತ್ಯೆ ಕೂಡ ನಿಗೂಢವಾಗಿಯೇ ನಡೆದು ಹೋಗಿದೆ. 2016ರಿಂದ ಇದರ ತನಿಖೆ ನಡೆಯುತ್ತಲಿದ್ದು, ಇದೀಗ ನಟಿ ಐಶ್ವರ್ಯಾ ರೈ ಅವರ ವಿಚಾರಣೆಗೆಂದು ಸಮನ್ಸ್ ಜಾರಿ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಇ.ಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ. ವಿದೇಶದಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಕೂಡಿಟ್ಟ ಬಗ್ಗೆ ಅವರು ಉತ್ತರಿಸಬೇಕಿದೆ. ಮೂಲಗಳ ಪ್ರಕಾರ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಜಾರಿ ನಿರ್ದೇಶನಾಲಯವು ದಾಖಲಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅವರು ತಮ್ಮ ಹೇಳಿಕೆಯನ್ನು ದಾಖಲಿಸುವಂತೆ ಐಶ್ವರ್ಯಾ ರೈ ಬಚ್ಚನ್ ಅವರಿಗೆ ಸೂಚಿಸಲಾಗಿದೆ. ನಿನ್ನೆ ಅವರನ್ನು ವಿಚಾರಣೆಗೆ ಹಾಜರಾಗಲು ಹೆಳಲಾಗಿತ್ತು. ಆದರೆ ಅವರು ಬೇರೆ ದಿನಾಂಕವನ್ನು ಕೇಳಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಎರಡು ಬಾರಿ ಅವರು ವಿಚಾರಣೆ ದಿನಾಂಕ ಮುಂದೂಡಲು ಕೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.