ತಿಂಡಿ ಪೊಟ್ಟಣ ತಂದು 'ಮಿಲನ'ದ ಬೆಡಗಿ ಪಾರ್ವತಿಗೆ ಕಿರುಕುಳ ನೀಡುತ್ತಿದ್ದಾತ ಕೊನೆಗೂ ಅಂದರ್!
Thursday, December 23, 2021
ತಿರುವನಂತಪುರ: 'ಮಿಲನ'ದ ಬೆಡಗು ಪಾರ್ವತಿ ತಿರುವೋತು ಮನೆಗೆ ನುಗ್ಗಿ ಆಹಾರ ಪೊಟ್ಟಣಗಳನ್ನು ತಂದು ಕಿರುಕುಳ ನೀಡುತ್ತಿದ್ದ ದುಷ್ಕರ್ಮಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ.
ಈತ ನಟಿ ಪಾರ್ವತಿಯನ್ನು ಹಿಂಬಾಲಿಸಿಕೊಂಡು, ಆಕೆಯ ಮನೆಗೆ ಬರುವುದೂಲ್ಲದೇ, ನಿರಂತರವಾಗಿ ಫೋನ್ ಕರೆಗಳನ್ನು ಮಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ನಟಿ ಪಾರ್ವತಿ ತಿರುವೋತು ಪೊಲೀಸ್ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿ ಕೊಲ್ಲಂ ಮೂಲದ ಅಫ್ಸಲ್ ಎಂಬಾತನನ್ನು (34) ಪೊಲೀಸರು ಬಂಧಿಸಿದ್ದಾರೆ.
ಈತ ತಿಂಡಿ ಪೊಟ್ಟಣವನ್ನು ತಂದು ತೆಗೆದುಕೊಳ್ಳುವಂತೆ ಪೀಡಿಸುತ್ತಿದ್ದ. ತಮಗೆ ಅದೆಲ್ಲಾ ಬೇಡವೆಂದು ಹಲವು ಬಾರಿ ಈತನಿಗೆ ಹೇಳಿದ್ದರೂ ಮತ್ತೆ ಮತ್ತೆ ತಿಂಡಿ ಪೊಟ್ಟಣ ತರುವ ನೆಪದಲ್ಲಿ ಪಾರ್ವತಿ ಮನೆಗೆ ಭೇಟಿ ನೀಡುತ್ತಿದ್ದ. ಅಲ್ಲದೆ ಮನೆಯ ಭದ್ರತಾ ಸಿಬ್ಬಂದಿಯೊಂದಿಗೂ ಕ್ಯಾತೆ ತೆಗೆದು ಒಳಗೆ ನುಗ್ಗುತ್ತಿದ್ದ.
ಈತನ ವಿರುದ್ಧ ಈ ಹಿಂದೆಯೇ ನಟಿ ಪಾರ್ವತಿ ದೂರು ದಾಖಲಿಸಿದ್ದರು. ಅಂತೂ ಇದೀಗ ಈ ದುಷ್ಕರ್ಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯರ ಮೇಲಾಗುತ್ತಿರುವ ನಾನಾ ರೀತಿಯ ದೌರ್ಜನ್ಯಗಳ ಕುರಿತು ಪಾರ್ವತಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಮಲಯಾಳಂ ಭಾಷೆಯ ನಟಿಯಾಗಿರುವ ಪಾರ್ವತಿ, ಕನ್ನಡದಲ್ಲಿಯೂ ನಟಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿನಯದ ಮಿಲನ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ‘ಪೃಥ್ವಿ’, ‘ಮಳೆ ಬರಲಿ ಮಂಜೂ ಇರಲಿ’, ‘ಅಂದರ್ ಬಾಹರ್’ ಮೊದಲಾದ ಸಿನಿಮಾಗಳಲ್ಲಿ ಪಾರ್ವತಿ ನಾಯಕಿಯಾಗಿದ್ದಾರೆ.