ವಿವಾಹ ಮಾಡಿಕೊಳ್ಳುವ ನೆಪದಲ್ಲಿ ಪೊಲೀಸಪ್ಪನಿಂದ ವಂಚನೆ: ಹಲವು ಮಹಿಳೆಯರಿಂದ ಎಸ್ಪಿಗೆ ದೂರು
Sunday, December 19, 2021
ಕೊಪ್ಪಳ: ಜನತೆಗೆ ನ್ಯಾಯ ಕೊಡೊಸಬೇಕಾದ ಆರಕ್ಷಕನೇ ಭಕ್ಷಕನಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಈತನ ಮೇಲೆ ಮದುವೆ ಮಾಡಿಕೊಳ್ಳುವ ನೆಪದಲ್ಲಿ ಹಲವು ಮಹಿಳೆಯರಿಗೆ ವಂಚನೆ ಮಾಡಿರುವ ಆರೋಪ ಕೇಳಿ ಬರುತ್ತಿದೆ.
ಫಿಂಗರ್ ಪ್ರಿಂಟ್ ವಿಭಾಗದ ಪಿಎಸ್ಐ ಮುತ್ತಪ್ಪ ಬಡಿಗೇರ ಎಂಬಾತನ ಮೇಲೆ ವಂಚನೆಗೊಳಗಾದವರು ದೂರು ನೀಡಿದ್ದಾರೆ. ಈತ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಮೋಸ ಮಾಡಿದ್ದಾನೆಂದು ಹಲವು ಮಹಿಳೆಯರು ಮುತ್ತಪ್ಪನ ವಿರುದ್ಧ ಮೌಖಿಕವಾಗಿ ದೂರು ದಾಖಲು ಮಾಡಿದ್ದಾರೆ.
ವಧುವನ್ನು ನೋಡುವ ನೆಪದಲ್ಲಿ ಈತ ತಮ್ಮನ್ನು ಯಾಮಾರಿಸುತ್ತಿದ್ದ. ಬಳಿಕ ತಮ್ಮನ್ನೇ ಮದುವೆಯ ಮಾಡಿಕೊಳ್ಳುವುದಾಗಿ ಹೇಳಿ ವಂಚನೆ ಮಾಡಿದ್ದಾನೆ ಎಂದು ನಾಲ್ಕೈದು ಮಹಿಳೆಯರು ಆರೋಪಿಸಿದ್ದಾರೆ. ಈ ಬಗ್ಗೆ ಕೊಪ್ಪಳ ಎಸ್ಪಿ ಕಚೇರಿ ಆಗಮಿಸಿರುವ ಮಹಿಳೆಯರು ತಮಗೆ ನ್ಯಾಯ ಕೊಡಿಸಬೇಕೆಂದು ಕೋರಿಕೊಂಡಿದ್ದಾರೆ.
ಅಲ್ಲದೆ ಮಹಿಳೆಯೊಬ್ಬರ ಕುಟುಂಬದಿಂದ ಕೊಪ್ಪಳ ಎಸ್ಪಿ ಅವರಿಗೆ ಮೌಖಿಕ ದೂರು ದಾಖಲಾಗಿದೆ. ತಮ್ಮ ವಿರುದ್ಧ ಮಹಿಳೆಯರು ಆರೋಪಿಸುತ್ತಿದ್ದಂತೆಯೇ ಮುತ್ತಣ್ಣ ಬಡಿಗೇರ್ ಎಸ್ಕೇಪ್ ಆಗಿದ್ದಾನೆ. ಅವರ ವಿರುದ್ಧ ಇನ್ನಷ್ಟು ಸಂದೇಹ ಬಲವಾಗಿದೆ. ಈ ಕುರಿತು ಕೊಪ್ಪಳ ಎಸ್ಪಿ ಟಿ.ಶ್ರೀಧರ್, ಫಿಂಗರ್ ಪ್ರಿಂಟ್ ವಿಭಾಗದ ಎಡಿಜಿಯವರಿಗೆ ಪತ್ರ ಬರೆದಿದ್ದಾರೆ. ಸದ್ಯ ಯಾವುದೇ ಲಿಖಿತ ದೂರು ಬರಲಿಲ್ಲ. ದೂರು ಬಂದರೆ, ಕಾನೂನುಬದ್ಧವಾಗಿ ಕ್ರಮ ಜರುಗಿಸುವುದಾಗಿ ಶ್ರೀಧರ್ ಹೇಳಿದ್ದಾರೆ.