ದೂರು ನೀಡಲು ಬರುವ ಮಹಿಳೆಯರೊಂದಿಗೆ ಅಸಭ್ಯ ವರ್ತನೆ: ಹಾವೇರಿ ಮಹಿಳಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಅಮಾನತು!
Monday, December 20, 2021
ಹಾವೇರಿ: ಮಹಿಳೆಯರಿಗೆ ತೊಂದರೆಯಾದಾಗ ರಕ್ಷಣೆ ನೀಡಬೇಕಾದ ಆರಕ್ಷಕನೇ ದೂರು ಕೊಡಲು ಬರುವ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾನೆಂಬ ಆರೋಪದ ಮೇಲೆ ಹಾವೇರಿ ಮಹಿಳಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಚಿದಾನಂದನನ್ನು ಪೊಲೀಸ್ ಇಲಾಖೆ ಅಮಾನತು ಮಾಡಿದೆ.
ಈತನ ಮೇಲೆ ಹಲವು ವರ್ಷಗಳಿಂದ ಭಾರಿ ಆರೋಪ ಕೇಳಿ ಬರುತ್ತಿದೆ. ಮಹಿಳೆಯರು ದೂರು ನೀಡಲು ಬಂದರೆ ಅವರನ್ನು ಸನ್ನೆ ಮಾಡಿ ಈತ ಕರೆಯುತ್ತಿದ್ದ. ಮಾತ್ರವಲ್ಲದೆ ದೂರು ನೀಡಲು ಬಂದ ಮಹಿಳೆಯರ ಮೊಬೈಲ್ ಸಂಖ್ಯೆಗಳನ್ನು ಪಡೆಯುವ ಈತ ಅವರಿಗೆ ವೀಡಿಯೋಕಾಲ‌್ ಮಾಡಿ ಅಶ್ಲೀಲವಾದ ಸನ್ನೆಗಳನ್ನು ಮಾಡುತ್ತ ಬಳಿಗೆ ಕರೆಯುತ್ತಿದ್ದ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿದ್ದವು.
2018ರಲ್ಲಿ ಕೂಡ ಇದೇ ರೀತಿ ಈತನ ವಿರುದ್ಧ ದೂರು ಕೇಳಿಬಂದಿತ್ತು. ಆಗ ಕೆಲವು ಮಹಿಳೆಯರು ಠಾಣೆಗೆ ಮುತ್ತಿಗೆ ಹಾಕಿ, ಎಲ್ಲರೂ ಸೇರಿ ಥಳಿಸಿದ್ದರು. ಆದರೂ ಈತನ ಬುದ್ಧಿ ನೆಟ್ಟಗಾಗಿರಲಿಲ್ಲ. ಇದೀಗ ಈತನ ವರ್ತನೆ ಮಿತಿಮೀರಿದ್ದು, ಮಹಿಳೆಯರ ಜತೆ ಅಸಭ್ಯವಾಗಿ ನಡೆದುಕೊಳ್ಳಲು ಶುರು ಮಾಡಿದ್ದನು. ದೂರಯ ಕೊಡಲು ಬಂದಾಗ ಅವರ ವೀಕ್‌ನೆಸ್ ಅನ್ನೇ ಬಂಡವಾಳ ಮಾಡಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದನೆಂದು ಹಲವರು ದೂರಿದ್ದಾರೆ.
ಆತ ವೀಡಿಯೋ ಕಾಲ್ ಮಾಡಿದಾಗ ಅಸಭ್ಯವಾಗಿ ವರ್ತಿಸುತ್ತಿದ್ದ ದೃಶ್ಯಗಳನ್ನು ವೈರಲ್ ಮಾಡಲಾಗಿದೆ. ಈ ಬಗ್ಗೆ ದಾವಣಗೆರೆ ಐಜಿಪಿಗೆ ಹಲವು ಮಹಿಳೆಯರು ದೂರು ನೀಡಿದ್ದಾರೆ. ಆದ್ದರಿಂದ ಆತನ ಅಸಭ್ಯ ವರ್ತನೆಯ ವೈರಲ್ ವೀಡಿಯೋ ಹಾಗೂ ದೂರನ್ನು ಆಧರಿಸಿ ಕೊನೆಗೂ ಈ ಕಾಮುಕ ಪೊಲೀಸ್ ನನ್ನು ಅಮಾನತುಗೊಳಿಸಲಾಗಿದೆ.