ಆರನೇ ತರಗತಿಯ ವಿದ್ಯಾರ್ಥಿಗಳಿಗೆ ಕರೀನಾ - ಸೈಫ್ ಪುತ್ರನ ಬಗ್ಗೆ ಪ್ರಶ್ನೆ: ವೈರಲ್ ಆಯ್ತು ಪ್ರಶ್ನೆ ಪತ್ರಿಕೆ
Sunday, December 26, 2021
ಮುಂಬೈ: ಮಧ್ಯಪ್ರದೇಶದ ಖಾಸಗಿ ಶಾಲೆಯೊಂದರ ಆರನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿನ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ಖಾನ್ ಮೊದಲ ಮಗನ ಪೂರ್ತಿ ಹೆಸರನ್ನು ವ್ಯವಹಾರಗಳ ಪ್ರಶ್ನೆಯಾಗಿ ಕೇಳಲಾಗಿದೆ. ಸದ್ಯ, ಈ ವಿಚಾರದ ಬಗ್ಗೆ ಎಲ್ಲರೂ ಹುಬ್ಬೇರಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
6ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆಯಲ್ಲಿ ಇಂತಹ ಪ್ರಶ್ನೆ ಕೇಳಿರುವ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರು ರಾಜ್ಯ ಶಿಕ್ಷಣ ಇಲಾಖೆಗೆ ವಿನಂತಿಸಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಖಾಂಡ್ವಾ ಜಿಲ್ಲಾ ಶಿಕ್ಷಣಾಧಿಕಾರಿ ( ಡಿಇಒ ) ಸಂಜೀವ್ ಭಲೇರಾವ್ ಶಾಲೆಗೆ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದೀಗ ಈ ಪ್ರಶ್ನೆ ಪತ್ರಿಕೆ ಭಾರೀ ವೈರಲ್ ಆಗುತ್ತಿದೆ.
ಅಂದಹಾಗೆ, ಕರೀನಾ - ಸೈಫ್ ಮೊದಲ ಪುತ್ರ ತೈಮೂರ್ ಅಲಿ ಖಾನ್ ಹುಟ್ಟುವ ಮೊದಲೇ ಭಾರೀ ಸುದ್ದಿಯಲ್ಲಿದ್ದವನು. ಈಗಲೇ ತಮ್ಮ ತಂದೆ ಮತ್ತು ತಾಯಿಯಷ್ಟು ಫೇಮಸ್ ಆಗಿದ್ದಾನೆ ತೈಮೂರ್. ಬಹಳ ಮುದ್ದು ಮುದ್ದಾದ ಮಗುವಾಗಿರುವ ತೈಮೂರ್‌ಗೆ ಬಹಳಷ್ಟು ಜನ ಅಭಿಮಾನಿಗಳಿದ್ದಾರೆ. ತೈಮೂರ್ ಫೋಟೋಗಳು, ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತವೆ.
ಈ ಹಿಂದೆ, ಸೈಫ್ ಮತ್ತು ಕರೀನಾ ತಮ್ಮ ಮಗನ ಹೆಸರನ್ನು ತೈಮೂರ್ ಅಲಿ ಖಾನ್ ಎಂದು ಘೋಷಿಸಿದಾಗ ಕೂಡ ಭಾರೀ ವಿವಾದ ಭುಗಿಲೆದ್ದಿತ್ತು. ತೈಮೂರ್ ಅಲಿ ಖಾನ್ ಎಂಬ ಹೆಸರು ಅನಾಗರಿಕ ಆಕ್ರಮಣಕಾರ ತೈಮೂರ್ ಅನ್ನು ನೆನಪಿಸುತ್ತದೆ ಎಂದು ನೆಟಿಜನ್‌ಗಳು ಆಗ ಆಕ್ರೋಶ ವ್ಯಕ್ತಪಡಿಸಿದ್ದರು.