ರ‍್ಯಾಗಿಂಗ್ ಗೆ ವಿದ್ಯಾರ್ಥಿನಿ ಬಲಿ: ದಿನನಿತ್ಯ ಕಾಟಕೊಡುತ್ತಿದ್ದ ನಾಲ್ವರು ಆರೋಪಿಗಳು ಸೆರೆ
Tuesday, December 28, 2021
ಚಿತ್ರದುರ್ಗ: ಈಗ ರ‍್ಯಾಗಿಂಗ್ ಮಾಡುವಂತಿಲ್ಲ ಎಂಬ ಕಾನೂನು ಇದೆ. ಮಾಡಿದಲ್ಲಿ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಆದರೆ, ಈ ಪಿಗುಡು ಮಾತ್ರ ಇನ್ನೂ ಅಳಿವಾಗಿಲ್ಲ. ನಿತ್ಯವೂ ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ರ‍್ಯಾಗಿಂಗ್ ವಿಚಾರ ಸುದ್ದಿಯಾಗುತ್ತಲೇ ಇದೆ. ಇದೀಗ ಚಿತ್ರದುರ್ಗ ಜಿಲ್ಲೆಯಲ್ಲಿ ರ‍್ಯಾಗಿಂಗ್ ಗೆ 17ರ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ.
ಹೊಸದುರ್ಗ ತಾಲೂಕಿನ ಕೋಡಿಹಳ್ಳಿಹಟ್ಟಿ ಗ್ರಾಮದ ನಿವಾದಿ ಪುತ್ರಿ ವಿ.ರಾಧಿಕಾ ಮೃತ ದುರ್ದೈವಿ. ಪಿಯುಸಿ ವಿದ್ಯಾರ್ಥಿನಿಯಾದ ಈಕೆಯನ್ನು ಪಾಣಿಕಿಟ್ಟದಹಳ್ಳಿ ಗ್ರಾಮದ ನಿವಾಸಿ ಮುತ್ತು ಅಲಿಯಾಸ್ ಮುತ್ತಪ್ಪ(21), ಶೀರೆನಕಟ್ಟೆ ಗ್ರಾಮದ ನಿವಾಸಿಗಳಾದ ಸುದೀಪ್ (19), ಕೋಟೇಶ್ (19), ಅಭಿಷೇಕ್ (22) ಎಂಬ ನಾಲ್ವರು ಯುವಕರು ರೇಗಿಸುತ್ತಿದ್ದರು ಎನ್ನಲಾಗಿದೆ.
ರಾಧಿಕಾ ಪ್ರತಿನಿತ್ಯ ಕಾಲೇಜಿಗೆ ಹೋಗುವ ಸಂದರ್ಭ ಹಾಗೂ ವಾಪಸ್ ಮನೆಗೆ ಬರುವಾಗ ಕಲ್ಲು ಹೊಡೆಯೋದು ಸೇರಿದಂತೆ ಮಾನಸಿಕ ಕಿರಿಕಿರಿ ನೀಡಿ ರೇಗಿಸುತ್ತಿದ್ದರಂತೆ. ಇದರಿಂದ ಮನನೊಂದ ರಾಧಿಕಾ, ಡಿ.19ರಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈ ಬಗ್ಗೆ ಮೃತಳ ತಂದೆ ವಿಜಯಕುಮಾರ್, ಈ ನಾಲ್ವರು ಯುವಕರ ರ‍್ಯಾಗಿಂಗ್ ನಿಂದಲೇ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಯುವಕರು ನಿತ್ಯ ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರಿಗೆ ರೇಗಿಸುತ್ತಾ, ಕಲ್ಲು ಹೊಡೆಯುತ್ತಾ ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡುತ್ತಿದ್ದರು. ಅವರ ಕಾಟದಿಂದಲೇ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳಾದ ಮುತ್ತು ಅಲಿಯಾಸ್ ಮುತ್ತಪ್ಪ, ಸುದೀಪ್, ಕೋಟೇಶ್, ಅಭಿಷೇಕ್ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.