
ಪತ್ನಿಯ ಅಕ್ಕನ ಮಗಳನ್ನೇ ನಿರಂತರ ಅತ್ಯಾಚಾರ ಮಾಡಿ ಗರ್ಭಿಣಿಯನ್ನಾಗಿಸಿದ ಕಾಮುಕ: ಪೊಲೀಸರ ಭೀತಿಯಿಂದ ಆತ್ಮಹತ್ಯೆಗೆ ಯತ್ನ
Tuesday, December 7, 2021
ಮೈಸೂರು: ಪತ್ನಿಯ ಸಹೋದರಿಯ ಅಪ್ರಾಪ್ತ ಪುತ್ರಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಕಾಮುಕನೋರ್ವನು ಆಕೆಯನ್ನು ಗರ್ಭಿಣಿಯನ್ನಾಗಿಸಿ, ಇದೀಗ ಪೊಲೀಸರ ಭೀತಿಯಿಂದ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಾರೋಪುರ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು ತಾಲೂಕಿನ ಹಾರೋಪುರ ಗ್ರಾಮದ ಪ್ರದೀಪ್(26) ಆರೋಪಿ. ಈತ ಇದೀಗ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಾರೋಪುರದಲ್ಲಿ ಪುಟ್ಟ ಪೆಟ್ಟಿಗೆ ಅಂಗಡಿಯನ್ನು ನಡೆಸುತ್ತಿದ್ದ ಈತ ತನ್ನ ಪತ್ನಿಯನ್ನು ಹೆರಿಗೆಗೆಂದು ತವರು ಮನೆಗೆ ಕಳಿಸಿದ್ದಾನೆ. ಇತ್ತ ಪತ್ನಿಯ ಅಕ್ಕನ 14 ವರ್ಷದ ಅಪ್ರಾಪ್ತ ಮಗಳನ್ನು ತಬ್ಬಿಕೊಂಡ ಫೋಟೋವೊಂದನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಈ ರೀತಿ ಬೆದರಿಸಿ, ಬ್ಲಾಕ್ ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಪರಿಣಾಮ ಅಪ್ರಾಪ್ತೆ ಗರ್ಭಿಣಿಯಾಗಿದ್ದಾಳೆ.
ಆರೋಪಿ ಪ್ರದೀಪ್ ನಡೆಸಿರುವ ಕೃತ್ಯವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಖಾಸಗಿ ಲ್ಯಾಬ್ ಒಂದರಲ್ಲಿ ಅಬಾರ್ಷನ್ ಮಾಡಿಸುವ ಯತ್ನ ನಡೆದಿದೆ. ಈ ಸಂದರ್ಭದಲ್ಲಿ ಲ್ಯಾಬ್ ನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರದೀಪ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದೀಗ ಅಪ್ರಾಪ್ತ ಬಾಲಕಿ ಪುನರ್ವಸತಿ ಕೇಂದ್ರದ ಆಶ್ರಯದಲ್ಲಿದ್ದಾಳೆ.