ಅಪ್ರಾಪ್ತೆಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಪೊಲೀಸ್ ಪೇದೆ
Friday, December 3, 2021
ಹೈದರಾಬಾದ್: ರಕ್ಷಣೆ ಮಾಡಬೇಕಾದ ಆರಕ್ಷಕನೇ ರಾಕ್ಷಸನಂತೆ ವರ್ತಿಸಿದರೆ ಹೇಗೆ?. ಯಾರಿಗಾದರೂ ತೊಂದರೆಯಾದಲ್ಲಿ ಧಾವಿಸಿ ಬರಬೇಕಾದ ಪೊಲೀಸ್ ಕಾನ್ ಸ್ಟೇಬಲ್ ಓರ್ವನೇ ಅಪ್ರಾಪ್ತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿ ಪುರಸಭೆಯಲ್ಲಿ ನಡೆದಿದೆ.
ಹೈದರಾಬಾದ್ನ ಕುಕಟಪಲ್ಲಿಯ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಕಾನ್ ಸ್ಟೇಬಲ್ ಆಗಿರುವ ಶಂಕರಪಲ್ಲಿ ಪುರಸಭೆಯ ನಿವಾಸಿ ಶೇಖರ್ (35) ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದಾತ.
ಪೊಲೀಸ್ ಕಾನ್ ಸ್ಟೇಬಲ್ ಶೇಖರ್ ಮನೆಯಲ್ಲಿ ಕುಟುಂಬವೊಂದು ಕೆಲ ವರ್ಷಗಳಿಂದ ಬಾಡಿಗೆಗೆ ವಾಸವಿದೆ. ಬುಧವಾರ ಸಂತ್ರಸ್ತ ಬಾಲಕಿ ಓರ್ವಳೇ ಮನೆಯಲ್ಲಿದ್ದಳು. ಬಾಲಕಿಯ ಪಾಲಕರು ಕೆಲಸ ನಿಮಿತ್ತ ಹೊರಗಡೆ ಹೋಗಿದ್ದರು. ಇದನ್ನು ಗಮನಿಸಿದ ಶೇಖರ್ ಮನೆಯೊಳಗೆ ನುಗ್ಗಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಏಕಾಏಕಿ ಪೊಲೀಸ್ ಕಾನ್ ಸ್ಟೇಬಲ್ ಮನೆಯೊಳಗೆ ನುಗ್ಗಿ ಅಸಭ್ಯವಾಗಿ ವರ್ತಿಸಿರೋದರಿಂದ ಬೆದರಿದ ಬಾಲಕಿ ಬೊಬ್ಬೆ ಹಾಕಿದ್ದಾಳೆ. ತಕ್ಷಣ ಆಚೆಈಚೆ ಮನೆಯವರು ಓಡಿ ಬಂದಿದ್ದಾರೆ. ಆಗ ಪೇದೆಯ ಕೃತ್ಯ ಬಹಿರಂಗಗೊಂಡಿದೆ. ತಕ್ಷಣ ಸ್ಥಳೀಯರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಾಲಕಿಯ ಪಾಲಕರ ನೀಡಿರುವ ದೂರಿನನ್ವಯ ಆರೋಪಿಯ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿಯಲ್ಲಿಯೂ ದೂರು ದಾಖಲಾಗಿದೆ. ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಲಾಗಿದೆ.
ಇನ್ನು ಪೊಲೀಸ್ ಕಾನ್ ಸ್ಟೇಬಲ್ ಶೇಖರ್ ಸ್ಥಳೀಯ ಉದ್ಯಮಿಗಳಿಗೂ ಕಿರುಕುಳ ನೀಡುತ್ತಿದ್ದ ವಿಚಾರವೂ ಕೂಡ ಇದೇ ಸಂದರ್ಭದಲ್ಲಿ ಬಯಲಾಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ.