ಸಂಚರಿಸುತ್ತಿದ್ದ ಕಾರಿನಲ್ಲಿಯೇ ಯುವತಿಯ ಅತ್ಯಾಚಾರಗೈದ ಆರೋಪಿಗಳಿಬ್ಬರು ಅಂದರ್
Sunday, December 26, 2021
ಫಿರೋಝಾಬಾದ್: ಸಂಚಾರ ಮಾಡುತ್ತಿದ್ದ ಕಾರಿನಲ್ಲಿಯೇ ಇಬ್ಬರು ಕಾಮುಕರು 18ರ ಹರೆಯದ ಯುವತಿಯನಯ ಅತ್ಯಾಚಾರವೆಸಗಿರುವ ಘಟನೆ ಆಗ್ರಾದ ಸಿಕಂದ್ರಾ ಪ್ರದೇಶದಲ್ಲಿ ನಡೆದಿದೆ. ಅತ್ಯಾಚಾರ ರವಿವಾರ ನಡೆದಿದ್ದರೂ ತಡವಾಗಿ ಅಂದರೆ ಗುರುವಾರ ಪೊಲೀಸ್ ದೂರನ್ನು ದಾಖಲಾಗಿದೆ.
ಅತ್ಯಾಚಾರಕ್ಕೊಳಗಾದ ಯುವತಿಗೆ ಆರು ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಆರೋಪಿಗಳ ಪೈಕಿ ಕೃಷ್ಣ ಬಘೇಲ್ (24) ಎಂಬಾತನ ಪರಿಚಯವಾಗಿದೆ. ಆ ಬಳಿಕ ಆರೋಪಿ ಆಕೆಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದು, ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದ.
ಅದಕ್ಕೆ ಯುವತಿ ಒಪ್ಪಿಕೊಂಡಿದ್ದಾಳೆ. ಆಕೆಯನ್ನು ಭೇಟಿಯಾಗಲು ಕೃಷ್ಣ ಬಘೇಲ್ ತನ್ನ ಸ್ನೇಹಿತ ಹೇಮಂತ್ ಕುಮಾರ್ ಎಂಬಾತನೊಂದಿಗೆ ಬಂದಿದ್ದಾನೆ. ಈ ಸಂದರ್ಭ ಇಬ್ಬರೂ ಸೇರಿ ಕಾರಿನಲ್ಲಿಯೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಈ ಬಗ್ಗೆ ದೂರು ನೀಡಿರುವ ಸಂತ್ರಸ್ತೆ "ಆರೋಪಿಗಳು ತನಗೆ ಬಿಯರ್ ಸೇವಿಸುವಂತೆ ಒತ್ತಾಯ ಮಾಡಿದ್ದಾರೆ. ತಾನು ಅದನ್ನು ನಿರಾಕರಿಸಿದ್ದೆ. ಆಗ ತನ್ನ ತಲೆಯನ್ನು ಕಾರಿನ ಬಾಗಿಲಿಗೆ ಅಪ್ಪಳಿಸಿದ ಅವರು ಬಲವಂತದಿಂದ ತನಗೆ ಬಿಯರ್ ಕುಡಿಸಿದ್ದರು. ಬಳಿಕ ತನ್ನ ಮೇಲೆ ಲೈಂಗಿಕ ಕ್ರಿಯೆ ನಡೆಸಿದ್ದು, ಅದನ್ನು ಆರೋಪಿಗಳು ವೀಡಿಯೊ ಚಿತ್ರೀಕರಿಸಿದ್ದಾರೆ. ಈ ಬಗ್ಗೆ ಯಾರಲ್ಲಾದರೂ ಬಾಯಿಬಿಟ್ಟರೆ ವೀಡಿಯೋ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು" ಎಂದು ಯುವತಿ ಆರೋಪಿಸಿದ್ದಾಳೆ.
'ತನ್ನ ಸೋದರಿ ನಿದ್ರೆಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು, ಅದೃಷ್ಟವಶಾತ್ ಆಕೆಯನ್ನು ರಕ್ಷಿಸಲಾಗಿದೆ' ಎಂದು ಯುವತಿಯ ಸೋದರ ತಿಳಿಸಿದ್ದಾನೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಸಾಮೂಹಿಕ ಅತ್ಯಾಚಾರದ ಆರೋಪದಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.