ಕೊರಟಗೆರೆ: ಅಪ್ರಾಪ್ತ ವಿದ್ಯಾರ್ಥಿನಿಗೆ 'ಮತ್ತು ಬರುವ' ಔಷಧಿ ಬೆರೆಸಿ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಆರೋಪಿ ಸೆರೆ
Thursday, December 9, 2021
ಕೊರಟಗೆರೆ: ನೋಟ್ಸ್ ಪುಸ್ತಕ ಕೊಡುವ ನೆಪದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮನೆಗೆ ಬಂದಿರುವ ಸ್ನೇಹಿತನೋರ್ವ ತಂಪು ಪಾನೀಯದಲ್ಲಿ 'ಮತ್ತು ಬರುವ' ಔಷಧಿ ಬೆರೆಸಿ ಅತ್ಯಾಚಾರವೆಸಗಿ, ಗರ್ಭಿಣಿಯನ್ನಾಗಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಕೊರಟಗೆರೆಯ ಇಮ್ರಾನ್ ಪಾಷಾ ಎಂಬವರ ಪುತ್ರ ಅಸ್ಲಾಂ ಎಂಬಾತ ಅತ್ಯಾಚಾರಗೈದಿರುವ ಆರೋಪಿ.
ಆರೋಪಿ ಅಸ್ಲಾಂ ಇಲ್ಲಿನ ಖಾಸಗಿ ಪ್ರೌಢಶಾಲೆಯ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ನೋಟ್ಸ್ ಕೊಡುವ ನೆಪದಲ್ಲಿ ಮನೆಗೆ ಹೋಗಿದ್ದಾನೆ. ಈ ಸಂದರ್ಭ ಆತ ತಂಪು ಪಾನೀಯದಲ್ಲಿ 'ಮತ್ತು ಬರುವ' ಔಷಧಿಯನ್ನು ಬೆರೆಸಿ ಕುಡಿಸಿ ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಈ ಘಟನೆಯನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಒಡ್ಡಿದ್ದಾನೆ. ಪರಿಣಾಮ ಸಂತ್ರಸ್ತ ವಿದ್ಯಾರ್ಥಿನಿ ಪ್ರಕರಣದ ಬಗ್ಗೆ ಎಲ್ಲೂ ಬಾಯಿಬಿಟ್ಟಿಲ್ಲ.
ಆದರೆ ಇತ್ತೀಚೆಗೆ ವಿದ್ಯಾರ್ಥಿನಿಯ ಆರೋಗ್ಯದಲ್ಲಿ ಏರುಪೇರು ಆಗಿದ್ದು, ಈ ಹಿನ್ನೆಲೆಯಲ್ಲಿ ಆಕೆಯನ್ನು ಪೋಷಕರು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಈ ಸಂದರ್ಭ ವೈದ್ಯರು ತಪಾಸಣೆ ಮಾಡಿದಾಗ ಅಪ್ರಾಪ್ತ ಬಾಲಕಿ ಗರ್ಭವತಿಯಾಗಿರುವುದಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪ್ರಕರಣ ಪೋಷಕರ ಗಮನಕ್ಕೆ ಬಂದಿದ್ದು, ತಕ್ಷಣ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.