
ಉದ್ಘಾಟನೆಗಾಗಿ ತೆಂಗಿನಕಾಯಿ ಒಡೆದಾಗ ಬಿರುಕು ಬಿಟ್ಟ ನೂತನ ರಸ್ತೆ!
Sunday, December 5, 2021
ಲಕ್ನೋ: ಎಲ್ಲೆಡೆ ಕಳಪೆ ಕಾಮಗಾರಿಗಳೇ ನಡೆಯುತ್ತಿದೆ ಎಂಬ ಕೂಗು ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ಬಿಜೆಪಿ ಶಾಸಕರೊಬ್ಬರು ನೂತನವಾಗಿ ಕಾಮಗಾರಿ ನಡೆದಿರುವ ರಸ್ತೆಯ ಉದ್ಘಾಟನೆಗಾಗಿ ತೆಂಗಿನಕಾಯಿಯನ್ನು ಒಡೆದಾಗ ರಸ್ತೆಯೇ ಬಿರುಕು ಬಿಟ್ಟ ಪ್ರಸಂಗ ನಡೆದಿದೆ.
ಈ ಘಟನೆಯಿಂದ ತೀವ್ರ ಅಸಮಾಧಾನಗೊದ ಬಿಜೆಪಿ ಶಾಸಕಿ ಸುಚಿ ಚೌಧರಿ ಧರಣಿ ಕುಳಿತು ರಸ್ತೆಯ ಕಳಪೆ ಗುಣಮಟ್ಟದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೂಲಗಳ ಪ್ರಕಾರ ರಸ್ತೆ ನಿರ್ಮಾಣಕ್ಕೆ ಒಟ್ಟು 1.16 ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ಕಾಮಗಾರಿ ನಡೆದಿತ್ತು. ಗುರುವಾರ ಸಂಜೆ ಬಿಜ್ನೋರ್ ಶಾಸಕ ಖೇಡಾ ಗ್ರಾಮದ ಬಳಿ 7 ಕಿ.ಮೀ. ಉದ್ದದ ರಸ್ತೆ ಉದ್ಘಾಟನೆಗೆ ತೆರಳಿದ್ದರು. ಉದ್ಘಾಟನಾ ಸಮಾರಂಭದಲ್ಲಿ ರಸ್ತೆಗೆ ತೆಂಗಿನಕಾಯಿ ಒಡೆದಿದ್ದು, ಈ ಸಂದರ್ಭದಲ್ಲಿ ರಸ್ತೆಯೇ ಬಿರುಕು ಬಿಟ್ಟು ಜಲ್ಲಿಕಲ್ಲು ಕಾಣಿಸಿಕೊಂಡಿದೆ ಹೊರತು ತೆಂಗಿನಕಾಯಿ ಒಡೆದಿಲ್ಲ.
ಸ್ಥಳದಲ್ಲಿಯೇದ್ದ ಶಾಸಕಿಯ ಪತಿ ಮೌಸಂ ಚೌಧರಿ ಹೊಸದಾಗಿ ನಿರ್ಮಿಸಿದ ರಸ್ತೆಯಲ್ಲಿ ಹಾರೆ ಬಳಸಿದಾಗ ಮೇಲ್ಮೈ ಶಿಥಿಲವಾಗಲು ಪ್ರಾರಂಭಿಸಿದೆ. ವಿಶ್ಲೇಷಣೆಗಾಗಿ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎಂದು ನೀರಾವರಿ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ವಿಕಾಸ್ ಅಗರ್ವಾಲ್ ಹೇಳಿದ್ದಾರೆ.