ಆರ್ ಟಿಐ ಕಾರ್ಯಕರ್ತ, ಮಹಿಳಾ ಅಧಿಕಾರಿಯ ಭ್ರಷ್ಟಾಚಾರದ ಗುಟ್ಟು ಆಡಿಯೋ ವೈರಲ್ ನಿಂದ ಬಯಲು!
Sunday, December 26, 2021
ಬೆಂಗಳೂರು: ಆರ್ ಟಿಐ ಕಾರ್ಯಕರ್ತ ಹಾಗೂ ಮಹಿಳಾ ಅಧಿಕಾರಿಯೋರ್ವಳು ಒಬ್ಬರಿಗೊಬ್ಬರು ಮಾತನಾಡಿಕೊಂಡೇ ಭ್ರಷ್ಟಾಚಾರದ ಕುಕೃತ್ಯವನ್ನು ಎಸಗುತ್ತಿದ್ದ ಘಟನೆಯೊಂದು ಪ್ರಕರಣಕ್ಕೆ ದೊರಕಿರುವ ವಿಚಿತ್ರ ತಿರುವಿನಿಂದ ಬಯಲಿಗೆ ಬಂದಿದೆ.
ಮಹಿಳಾ ಅಧಿಕಾರಿಯ ಪಾಲಿಗೆ ವಿಲನ್ ಆಗಿದ್ದ ಆರ್ಟಿಐ ಕಾರ್ಯಕರ್ತ ದೂರಿನ ಬಳಿಕ ಬಂಧನಕ್ಕೀಡಾಗಿದ್ದ. ಆದರೆ ಅದಾಗಿ ನಾಲ್ಕೇ ದಿನಗಳಲ್ಲಿ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿ ಅಸಲಿಯತ್ತು ಬಯಲಾಗಿದೆ. ಈಗ ಮಹಿಳಾ ಅಧಿಕಾರಿಯೂ ಭ್ರಷ್ಟಳು ಎಂಬ ಅನುಮಾನ ಮೂಡಲಾರಂಭಿಸಿದೆ. ಅಲ್ಲದೆ ಆಕೆಯೇ ಆರ್ ಟಿಐ ಕಾರ್ಯಕರ್ತನನ್ನು ಬಲಿಪಶು ಮಾಡಿದಳೇ ಎಂಬ ಶಂಕೆ ಉಂಟಾಗಿದೆ.
ಬೆಂಗಳೂರಿನ ಕತ್ರಿಗುಪ್ಪೆ ವಾರ್ಡ್ ನಂ.163ರ ವಾರ್ಡ್ ಅಸಿಸ್ಟೆಂಟ್ ಇಂಜಿನಿಯರ್ ಶ್ವೇತಾ ಕಚೇರಿಗೆ ಡಿ. 18ರಂದು ಆಗಮಿಸಿರುವ ಆರ್ಟಿಐ ಕಾರ್ಯಕರ್ತ ಕೃಷ್ಣಮೂರ್ತಿ, ಅಲ್ಲಿ ಆಕೆಯನ್ನು ಹೀನಾಮಾನವಾಗಿ ನಿಂದಿಸಿದ್ದಾನೆ. ನೀನು ಸರ್ಕಾರದ ಯಾವ ಡಿಪಾರ್ಟ್ಮೆಂಟ್ಗೆ ಹೋದ್ರೂ ಬಿಡೋದಿಲ್ಲ. ನಿನ್ನನ್ನು ಯಾವ ರೀತಿಯಲ್ಲಿ ಕೆಲಸದಿಂದ ವಜಾಗೊಳಿಸಬೇಕೆಂದು ಗೊತ್ತಿದೆ ಎಂದು ಬೆದರಿಕೆ ಒಡ್ಡಿದ್ದ. ಅಲ್ಲದೆ ಮಹಿಳಾ ಅಧಿಕಾರಿಯು ಹೋದಲ್ಲೆಲ್ಲಾ ಹಿಂಬಾಲಿಸಿಕೊಂಡು ಕಿರುಕುಳ ನೀಡಿದ್ದ.
ಇದರಿಂದ ಬೇಸತ್ತ ಮಹಿಳಾ ಸರಕಾರಿ ಅಧಿಕಾರಿ ಶ್ವೇತಾ ಆರ್ ಟಿಐ ಕಾರ್ಯಕರ್ತನ ಬಗ್ಗೆ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನನ್ವಯ ಪೊಲೀಸರು ಕೃಷ್ಣಮೂರ್ತಿಯನ್ನು ಡಿ.20ರಂದು ಬಂಧಿಸಿ ಪ್ರಕರಣ ದಾಖಲಿಸಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರವಾಣಿ ಸಂಭಾಷಣೆಯ ಆಡಿಯೋ ತುಣುಕೊಂದು ಬಹಿರಂಗಗೊಂಡಿದೆ. ಈ ಆಡಿಯೋ ವೈರಲ್ ಆಗಿರೋದು ಮಾತ್ರವಲ್ಲ, ಈ ಆಡಿಯೋದಲ್ಲಿ ಶ್ವೇತಾ-ಕೃಷ್ಣಮೂರ್ತಿ ಮಾತನಾಡಿದ್ದಾರೆ ಎನ್ನಲಾಗಿದೆ. ಪರಿಣಾಮ ಈ ಪ್ರಕರಣಕ್ಕೆ ಭಾರೀ ತಿರುವು ದೊರಕಿದಂತಾಗಿದೆ. ಈ ಆಡಿಯೋದಲ್ಲಿ ಶ್ವೇತಾ, ಆರ್ ಟಿಐ ಕಾರ್ಯಕರ್ತ ಕೃಷ್ಣಮೂರ್ತಿಗೆ ಕರೆ ಮಾಡಿ ಸೈಟ್ ಒಂದರ ಸಂಬಂಧ ಆರ್ಟಿಐ ಹಾಕಿಸುವಂತೆ ಹೇಳಿರುವುದು ಈ ಆಡಿಯೋದಲ್ಲಿ ದಾಖಲಾಗಿದೆ. ಇಲ್ಲಿನ ಸಂಭಾಷಣೆಯನ್ನು ಗಮನಿಸಿದರೆ ಈ ಮಹಿಳಾ ಅಧಿಕಾರಿ ಹಾಗೂ ಆರ್ಟಿಐ ಕಾರ್ಯಕರ್ತ ಜೊತೆಯಾಗಿ ಸಾರ್ವಜನಿಕರಿಂದ ಹಣ ಸುಲಿಗೆಗೆ ಯತ್ನಿಸಿದಂತಿದೆ.
ಸಿಪಿಸಿಪಿ ಲೇಔಟ್ನಲ್ಲಿರೋ ಸೈಟ್ ಸಂಖ್ಯೆ 65 ವಿಚಾರವಾಗಿ ಆರ್ಟಿಐ ಅರ್ಜಿ ಸಲ್ಲಿಸಲು ಶ್ವೇತಾ ಹೇಳಿದ್ದಳು. ಕೊನೆಗೆ ಪ್ರಕರಣ ತನ್ನ ಬುಡಕ್ಕೆ ಬರುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ಶ್ವೇತಾ, ಆರ್ ಟಿಐ ಕಾರ್ಯಕರ್ತ ಕೃಷ್ಣಮೂರ್ತಿಯನ್ನು ಬಲಿಪಶು ಮಾಡಲು ಯತ್ನಿಸಿರಬಹುದು ಎಂಬುವ ಸಂದೇಹ ಮೂಡಿದೆ. ಮುಂದೆ ಪ್ರಕರಣ ಯಾವ ರೀತಿ ತಿರುವು ಪಡೆಯಲಿದೆ ಎಂದು ಕಾದು ನೋಡಬೇಕಿದೆ.