ಸರಿಯಾಗಿ ನಡೆದಾಡಲು ಕಲಿಯುವ ಮೊದಲೇ ಸಮುದ್ರ ದಾಟಿದ ಒಂದು ವರ್ಷದ ಮಗು!
Monday, December 20, 2021
ರೋಮ್: ಒಂದು ವರ್ಷದ ಮಗುವೊಂದು ಏಕಾಂಗಿಯಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ಪ್ರಯಾಣಿಸಿ ಲಂಪೇಡುಸ ಎಂಬ ದ್ವೀಪಕ್ಕೆ ಸುರಕ್ಷಿತವಾಗಿ ತಲುಪಿದ್ದು, ಹೆತ್ತವರೇ ಇಂತಹ ಅಪಾಯಕಾರಿ ಸಾಹಸಕ್ಕೆ ಮಗುವನ್ನು ಒಡ್ಡಿದ್ದಾರೆಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ.
ಈ ದ್ವೀಪಕ್ಕೆ ಬಂದಿಳಿದಿರುವ ಸುಮಾರು 500ಕ್ಕೂ ಅಧಿಕ ವಲಸಿಗರಲ್ಲಿ ಈ ಮಗುವೂ ಸೇರಿಕೊಂಡಿದೆ. ದೋಣಿಯೊಂದರಲ್ಲಿ ಸಮುದ್ರ ದಾಟುತ್ತಿದ್ದ 70 ಮಂದಿ ವಲಸಿಗರ ನಡುವೆ ಈ ಮಗುವೂ ಇತ್ತೆಂದು ದಿ ರಿಪಬ್ಲಿಕ್ ಪತ್ರಿಕೆ ವರದಿ ಮಾಡಿದೆ.
ಈ ಬಾಲಕ ನಡೆಯಲು ಕಲಿಯುವ ಮೊದಲೇ ಸಮುದ್ರ ದಾಟಿದ್ದಾನೆ. ಇನ್ನೂ ಒಂದು ವರ್ಷದ ಮಗುವಾಗಿರುವ ಕಾರಣ ಅದರ ಹೆಸರು ಮತ್ತಿತರ ವಿವರ ಬಹಿರಂಗ ಪಡಿಸಲಾಗದು ಎಂದು ಪತ್ರಿಕೆ ಹೇಳಿದೆ.
ತಮ್ಮ ಮಧ್ಯೆ ಇರುವ ಈ ಮಗು ಯಾರೆಂಬುದು ಇತರ ವಲಸಿಗರಿಗೂ ಮಾಹಿತಿಯಿರಲಿಲ್ಲ. ಬಹುಶಃ ಮಗು ದೋಣಿ ಹತ್ತಿದ ಬಳಿಕ ಅದರ ಹೆತ್ತವರು ದೋಣಿ ಹತ್ತಲು ಮಂದಾದಾಗ ಅವರನ್ನು ತಡೆದಿರಬೇಕು. ಹಾಗಾಗಿ ಮಗು ಒಂಟಿಯಾಗಿ ಪ್ರಯಾಣಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ದ್ವೀಪಕ್ಕೆ ಬಂದು ತಲುಪಿರುವ ತಂಡದಲ್ಲಿ 14 ವರ್ಷದ ಮತ್ತೋರ್ವ ಬಾಲಕನಿದ್ದ. ಈತನ ತಾಯಿ ದೋಣಿ ಏರುವ ಸಂದರ್ಭ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾಳೆಂದು ಪತ್ರಿಕೆ ವರದಿ ಮಾಡಿದೆ.